

ಹಾನಗಲ್ಲ: ಪಟ್ಟಣದಲ್ಲಿ ಸರ್ಕಾರಿ ನೂತನ ಆಡಳಿತ ಭವನ ನಿರ್ವಣಗೊಂಡು ವರ್ಷವೇ ಕಳೆದರೂ, ವಿವಿಧ ಇಲಾಖೆಗಳ ಸ್ಥಳಾಂತರಕ್ಕೆ ಮೀನಮೇಷ ಎಣಿಸಲಾಗುತ್ತಿದೆ.
5 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಆಡಳಿತ ಭವನವನ್ನು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದಾರೆ. ನೆಲ ಮಹಡಿ ಹಾಗೂ ಎರಡು ಮೇಲ್ಮಹಡಿ ಹೊಂದಿದ ಹೊಸ ಕಟ್ಟಡಕ್ಕೆ ತಕ್ಷಣದಲ್ಲಿಯೇ ಸಮಾಜ ಕಲ್ಯಾಣ ಇಲಾಖೆ, ಏತ ನೀರಾವರಿ ಯೋಜನಾ ಉಪವಿಭಾಗ, ಕರ್ನಾಟಕ ರಾಜ್ಯ ಹೆದ್ದಾರಿಗಳ ಸುಧಾರಣಾ ಯೋಜನಾ ಇಲಾಖೆ, ರೇಷ್ಮೆ ಇಲಾಖೆ, ಕ್ಷೇತ್ರ ಶಿಕ್ಷಣಾಕಾರಿ ಕಾರ್ಯಾಲಯ, ಕಾರ್ವಿುಕ ಇಲಾಖೆ, ಅಬಕಾರಿ ಇಲಾಖೆ ಕಚೇರಿಗಳನ್ನು ಸ್ಥಳಾಂತರಿಸಲು ತಹಸೀಲ್ದಾರ್ ಎಸ್.ರೇಣುಕಾ ಆದೇಶಿಸಿದ್ದಾರೆ. ಬಾಡಿಗೆ ಕಟ್ಟಡದಲ್ಲಿರುವ ಕಚೇರಿಗಳನ್ನೆಲ್ಲ ನೂತನ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಇತ್ತೀಚೆಗೆ ಜರುಗಿದ ಕೆಡಿಪಿ ಸಭೆಯಲ್ಲಿ ಶಾಸಕರು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೂ, ಕೆಲ ಸರ್ಕಾರಿ ಕಚೇರಿಗಳು ಇನ್ನೂ ಖಾಸಗಿ ಕಟ್ಟಡದಲ್ಲಿಯೇ ಕಾಲ ನೂಕುತ್ತಿವೆ.
ಹೊಸ ಆಡಳಿತ ಭವನದ ಮುಖ್ಯದ್ವಾರಕ್ಕೆ ಹಾಕಿದ ಕೀಲಿಯನ್ನು ಯಾವ ಇಲಾಖೆಯೂ ತೆರೆದಿಲ್ಲ. ಕಟ್ಟಡ ಕಾಮಗಾರಿ ಪೂರ್ಣಗೊಂಡು ಒಂದು ವರ್ಷದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲು ಬಂದಾಗ ತಾಲೂಕು ಆಡಳಿತ ಭವನ ಸ್ವಚ್ಛಗೊಳಿಸಿತ್ತು. ಒಂದು ವರ್ಷಕ್ಕೂ ಹಿಂದೆಯೇ ಪೂರ್ಣಗೊಂಡ ಭವನಕ್ಕೆ ಈಗಲಾದರೂ ಖಾಸಗಿ ಕಟ್ಟಡಗಳಲ್ಲಿರುವ ಕಚೇರಿಗಳು ಸ್ಥಳಾಂತರ ಆಗಲಿವೆ ಎಂದುಕೊಂಡಿದ್ದರು ಸಾರ್ವಜನಿಕರು. ಆದರೆ, ಸ್ಥಳಾಂತರಗೊಳ್ಳುವ ಯಾವ ಸೂಚನೆಗಳೂ ಕಂಡುಬರುತ್ತಿಲ್ಲ. ಕಚೇರಿಗೆ ಸ್ವಂತ ಕಟ್ಟಡವಿಲ್ಲ ಎನ್ನುವ ಅಧಿಕಾರಿಗಳು, ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲು ಹಿಂದೇಟು ಹಾಕುತ್ತಿರುವುದು ಸೋಜಿಗದ ಸಂಗತಿ.
ಒಳ್ಳೆಯ ಮುಹೂರ್ತ, ಸಮಯಕ್ಕಾಗಿ ಕಾಯುತ್ತಿರಬಹುದು ಎಂಬ ಮಾತುಗಳು ಕೆಲ ಅಧಿಕಾರಿಗಳಿಂದ ಕೇಳಿಬರುತ್ತಿವೆ. ಆದರೆ, ಆ ಒಳ್ಳೆಯ ಸಮಯ ಯಾವುದು, ಯಾವಾಗ ಬರುತ್ತದೆ ಎಂಬ ಪ್ರಶ್ನೆ ಹಾಗೆ ಉಳಿದಿದೆ.
ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಳು ಇಲಾಖೆ ಕಚೇರಿಗಳನ್ನು ಹೊಸ ಭವನಕ್ಕೆ ಸ್ಥಳಾಂತರಿಸಲು ಈಗಾಗಲೇ ಆದೇಶಿಸಲಾಗಿದೆ. ಇನ್ನೂ ಸ್ಥಳಾಂತರಿಸದ ಕುರಿತು ವಿಚಾರಿಸಿ, ಕೂಡಲೇ ಸ್ಥಳಾಂತರಕ್ಕೆ ಕ್ರಮ ಜರುಗಿಸಲಾಗುವುದು. | ಎಸ್. ರೇಣುಕಾ, ತಹಸೀಲ್ದಾರ್