

ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾನಗರ, ಸುತ್ತಮುತ್ತಲ ಪ್ರದೇಶದ ಅಭಿವೃದ್ಧಿ ಚಟುವಟಿಕೆಗಳಿಗೆ ತೊಡಕಾಗಿದ್ದ ‘ಅರಣ್ಯ ತಗಾದೆ’ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಹೊಣೆ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಜಲ ಸಂಪನ್ಮೂಲ, ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಮಂಗಳವಾರ ವಿವಿಧ ಇಲಾಖೆಗಳ ಸಮನ್ವಯ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಬೆಂಗಳೂರು ಒಂದಾಗಿದೆ. ಇದರಿಂದಾಗಿ ಈ ಹಿಂದೆ ನಿರ್ಮಿಸಿದ್ದ ಕಸ ವಿಲೇವಾರಿ ಘಟಕಗಳು ನಗರ ಮಧ್ಯ ಭಾಗಕ್ಕೆ ಸೇರಿಕೊಂಡಿವೆ. ನರಕಯಾತನೆಯ ಬದುಕಿನಿಂದ ಪಾರು ಮಾಡಿ ಎಂದು ಸರ್ಕಾರದ ಮೇಲೆ ಜನರು ಒತ್ತಡ ಹೇರಿದ್ದಾರೆ. ಸಚಿವರು, ಶಾಸಕರು ಮನವಿ ಮಾಡಿಕೊಂಡಿದ್ದಾರೆ. ನಾನು ಖುದ್ದಾಗಿ ಪರಿಶೀಲಿಸಿದ್ದು, ನಾಲ್ಕೈದು ಕಿ.ಮೀ.ವರೆಗೆ ಕಸದ ಗಬ್ಬುವಾಸನೆ ಹರಡಿರುವುದು ಗಮನಕ್ಕೆ ಬಂದಿದೆ.
ನಾಗರಿಕರ ಸಮಸ್ಯೆಗೆ ಓಗೊಟ್ಟು, ಯಶವಂತಪುರ ಸೇರಿ ಒಟ್ಟು 10 ಕಸ ವಿಲೇವಾರಿ ಘಟಕಗಳನ್ನು ಬೆಂಗಳೂರು ಹೊರವಲಯದಿಂದ ದೂರದ ಬೆಟ್ಟ ಗುಡ್ಡಪ್ರದೇಶಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ.
ಯಶವಂತಪುರ ವಿಧಾನಸಭೆ ಕ್ಷೇತ್ರದ ಐದು, ಬ್ಯಾಟರಾಯನಪುರ ಎರಡು, ದಾಸರಹಳ್ಳಿ, ಆನೇಕಲ್ ಮತ್ತು ಮಹದೇವಪುರ ವಿಧಾನಸಭೆ ಕ್ಷೇತ್ರಗಳ ಕಸ ವಿಲೇವಾರಿ ಘಟಕಗಳನ್ನು ಸ್ಥಳಾಂತರಿಸಲಿದ್ದೇವೆ.
ಇದಕ್ಕಾಗಿ ನಗರದ ನಾಲ್ಕೂ ಮೂಲೆಗಳಲ್ಲಿ ತಲಾ 100 ಎಕರೆ ಜಾಗ ನೀಡುವಂತೆ ಕಂದಾಯ ಮತ್ತು ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಸಮೀಕ್ಷೆ ಮಾಡಿದ ಬಳಿಕ ಜಮೀನು ಗುರುತಿಸಲಿದ್ದು, ಪ್ರತಿಯಾಗಿ ಅರಣ್ಯ ಇಲಾಖೆಗೆ ಪರ್ಯಾಯ ಜಮೀನು ನೀಡಲಿದ್ದೇವೆ. ಇಲ್ಲವಾದರೆ ಕಂದಾಯ ಜಮೀನು ಖರೀದಿಸಿ ಒದಗಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.
ಬಿಡಿಎ ಸಮಸ್ಯೆ ನಿವಾರಣೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಸತಿ ಬಡಾವಣೆ ಅಭಿವೃದ್ಧಿಪಡಿಸಿ, ನಿವೇಶನಗಳನ್ನು ಹಂಚಿಕೆ ಮಾಡಿದೆ. ಬಹಳಷ್ಟು ಜನರು ಮನೆಗಳನ್ನು ಕಟ್ಟಿಸಿಕೊಂಡಾಗಿದೆ. ಈ ಪೈಕಿ ಒಂದು ಸಾವಿರ ನಿವೇಶನಗಳು ಅರಣ್ಯ ಪ್ರದೇಶದಲ್ಲಿವೆ ಎಂಬ ತಕರಾರು ಎದುರಿಸುತ್ತಿವೆ.
ಮರಗಳು ಇಲ್ಲವೆಂದಾದರೆ ಬಿಟ್ಟುಕೊಡಲು ಸಿದ್ಧವೆಂದು ಅರಣ್ಯ ಇಲಾಖೆ ತಿಳಿಸಿದ್ದು, ಬಿಡಿಎಗೆ ಸೇರಿದ 42 ಎಕರೆ ಜಮೀನು ಎರಡು ದಶಕಗಳಿಂದ ಈ ಸಮಸ್ಯೆಪೀಡಿತವಾಗಿದೆ.
ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನೀರಿನ ಕೊಳವೆ ಮಾರ್ಗ ಹಾಕಲು ಮೂರ‌್ನಾಲ್ಕು ಎಕರೆ, ಬನಶಂಕರಿ ಬಡಾವಣೆ ಜಾಗ, ಕೆಂಪೇಗೌಡ ಬಡಾವಣೆ ರಸ್ತೆಗೆ ಅರಣ್ಯ ಇಲಾಖೆ ಆಕ್ಷೇಪವೆತ್ತಿದ್ದು ಬರ್ ವಲಯದಲ್ಲಿ ಮರಗಳು ಇಲ್ಲದಿದ್ದರೆ ನಿರಾಕ್ಷೇಪಣೆ ಪತ್ರ ನೀಡುವುದಾಗಿ ಅರಣ್ಯ ಇಲಾಖೆ ತಿಳಿಸಿದೆ.
ತಿಪ್ಪಗೊಂಡನಹಳ್ಳಿ ನೀರು ಶುದ್ಧೀಕರಣದ ಬಗ್ಗೆ ಆ ಭಾಗದ ಶಾಸಕರ ಜತೆಗೆ ಚರ್ಚಿಸಲಾಗಿದೆ. ಮುಂದಿನ ಒಂದೂವರೆ ವರ್ಷದಲ್ಲಿ ನೀರು ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ನೀರಿಗೆ ಕೊಳವೆ ಸೇರದಂತೆ ನೋಡಿಕೊಳ್ಳಬೇಕಾಗಿದೆ.
ಜತೆಗೆ ಬರ್ ವಲಯದ ಅಂತರ ತಗ್ಗಿಸಲು 2017 ಮತ್ತು 2021ರಲ್ಲಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ. ಆದರೂ ಯೋಜನಾ ನಕ್ಷೆಗಳಿಗೆ ಅನುಮೋದನೆ ಸಿಗುತ್ತಿಲ್ಲ.
ಅಕ್ರಮವಾಗಿ ಮನೆ, ಕಟ್ಟಡಗಳು ನಿರ್ಮಾಣವಾಗಿವೆ. ಅಡತಡೆ ನಿವಾರಿಸಿ ಕಾನೂನುಬದ್ಧವಾಗಿ ಮನೆ, ಕಟ್ಟಡ ಕಟ್ಟಿಕೊಳ್ಳಲೆಂದು ತಿಪ್ಪಗೊಂಡನಹಳ್ಳಿ ಬರ್ ವಲಯ ಪುನರ್ ನಿಗದಿಪಡಿಸಲಾಗುವುದು.
ನೆಲಮಂಗಲ, ಡಾಬಸ್‌ಪೇಟೆ, ಶಿವಗಂಗೆ ಸೇರಿ ಅನೇಕ ಕಡೆಗಳಲ್ಲಿ ಪ್ಲ್ಯಾನ್‌ಗಳಿಗೆ ಅನುಮತಿ ಸಿಗುತ್ತಿಲ್ಲ ಎಂದು ಜನರು ಗಲಾಟೆ ಮಾಡುತ್ತಿದ್ದಾರೆ. ಹಿಂದಿನ ಸರ್ಕಾರದ ಕಾನೂನು ಜಾರಿಗೆ ತರಬೇಕೆಂದಿದೆ.
ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ, ಅರಣ್ಯ ಮತ್ತು ಕಾನೂನು ತಂಡ ಒಟ್ಟಾಗಿ ಕುಳಿತು ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಬಿಎಂಆರ್‌ಡಿಇ ಯೋಜನೆಗಳಿಗೆ ಸಂಬಂಧಿಸಿದಂತೆ ನಮಗೂ ಹಾಗೂ ಅರಣ್ಯ ಇಲಾಖೆ ನಡುವೆ ಸಮಸ್ಯೆಯಿದೆ. ಕಾವೇರಿ ನೀರಿನ ಪೈಪ್‌ಲೈನ್ 100 ಮೀಟರ್ ಅರಣ್ಯ ಜಾಗದಲ್ಲಿ ಬರುತ್ತಿದ್ದು, ಅದಕ್ಕೆ ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ.
ಇದರಿಂದಾಗಿ ಯೋಜನೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಪರ್ಯಾಯ ಜಾಗ ನೀಡುತ್ತೇವೆ ಕಾಮಗಾರಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದೇವೆ. ಅಲ್ಲದೆ, ಬೆಂಗಳೂರು ಸುತ್ತಮುತ್ತಲು ಆನೆ, ಚಿರತೆ ದಾಳಿ ಹೆಚ್ಚಳದ ಬಗ್ಗೆ ಅರಣ್ಯ ಇಲಾಖೆ ಸಚಿವರು, ಅಧಿಕಾರಿಗಳ ಗಮನಸೆಳೆಯಲಾಗಿದೆ