ಪಿಡಬ್ಲ್ಯುಡಿ ಉಪವಿಭಾಗಕ್ಕೆ ಚಾಲನೆ ; ದೇವದುರ್ಗದಲ್ಲಿದ್ದ ಕೆಶಿಪ್ ಕಚೇರಿ ಸ್ಥಳಾಂತರ

DSC_8227
Published on

ತುಮಕೂರು: ಲೋಕೋಪಯೋಗಿ ಇಲಾಖೆಯ ತುಮಕೂರು ನಗರ ಉಪವಿಭಾಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಶುಕ್ರವಾರ ಚಾಲನೆ ನೀಡಿದರು.

ತುಮಕೂರು ನಗರ, ಗ್ರಾಮಾಂತರ ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರ ಒಳಗೊಂಡಿದ್ದ ಕಚೇರಿಯನ್ನು ವಿಕೇಂದ್ರೀಕರಿಸಿದ್ದು, ಕೋರಾ ಹೋಬಳಿ ಒಳಗೊಂಡಂತೆ ತುಮಕೂರು ನಗರ ಹಾಗೂ ಯಾದಗಿರಿ ಜಿಲ್ಲೆಯ ದೇವದುರ್ಗದಲ್ಲಿದ್ದ ಕೆಶಿಪ್ ಕಚೇರಿಯನ್ನು ಒಟ್ಟುಗೂಡಿಸಿ ಉಪವಿಭಾಗ ರೂಪಿಸಲಾಗಿದೆ. ಉಪವಿಭಾಗವು ನಗರದ ಪಿಡಬ್ಲ್ಯುಡಿ ಕಚೇರಿ ಆವರಣದ ಮತ್ತೊಂದು ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಕಾರ್ಯಪಾಲಕ ಇಂಜಿನಿಯರ್ ಬಿ.ಪಿ.ಸಂಜೀವ್‌ರಾಜು ತಿಳಿಸಿದರು. ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಇದ್ದರು.

ಮಾಸ್ಕ್ ಧರಿಸದ ಸಚಿವ ಮಾಧುಸ್ವಾಮಿ!: ಗುರುವಾರ ಮಾಸ್ಕ್‌ಡೇ ಕಾರ್ಯಕ್ರಮದಲ್ಲಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ್ದ ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ಜಿಲ್ಲಾ ಜನರಿಗೆ ನೀಡಿದ್ದ ಎಚ್ಚರಿಕೆ ಒಂದೇ ದಿನಕ್ಕೆ ತಣ್ಣಗಾಯಿತು.

ಮಾಸ್ಕ್ ಧರಿಸದೇ ಶುಕ್ರವಾರ ವಿವಿಧ ಕಾರ್ಯಕ್ರಮ, ಸಭೆಗಳಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರೊಂದಿಗೆ ಇದ್ದ ಜಿಲ್ಲಾಧಿಕಾರಿ ಎಲ್ಲಿಯೂ ಯಾರೊಬ್ಬರಿಗೂ ದಂಡ ಹಾಕಿದ್ದು ಕಾಣಲಿಲ್ಲ. ಲೋಕೋಪಯೋಗಿ ಇಲಾಖೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಸಚಿವರ ಜತೆ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಪಿ.ಸಂಜೀವರಾಜು ಸಹಿತ ಸಾಕಷ್ಟು ಅಧಿಕಾರಿಗಳು ಮಾಸ್ಕ್ ಇಲ್ಲದೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಜತೆಯಲ್ಲಿಯೇ ಭಾಗಿಯಾದರು. ಜಿಲ್ಲಾಧಿಕಾರಿ ಗುರುವಾರದ ಕಾರ್ಯಕ್ರಮದಲ್ಲಿ ಹೇಳಿದ್ದು ಶ್ರೀಸಾಮಾನ್ಯರಿಗೆ ಮಾತ್ರ ಅದು ಅನ್ವಯ. ಸಚಿವರಿಗೆ ಅಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net