ಕಾಡಾನೆಗಳನ್ನು ಕೂಡಲೇ ಸ್ಥಳಾಂತರಿಸಿ

sudakhar sheety
Published on

ಎನ್.ಆರ್.ಪುರ: ಶೃಂಗೇರಿ ಕ್ಷೇತ್ರದ ಎನ್.ಆರ್.ಪುರ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು ಭಾಗದಲ್ಲಿ ಓಡಾಡುತ್ತಿರುವ ಕಾಡಾನೆಗಳನ್ನು ತಕ್ಷಣ ಸ್ಥಳಾಂತರಿಸಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಆಗ್ರಹಿಸಿದರು.

ಸೋಮವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗ ಕಾಡಾನೆಗಳ ಸಮಸ್ಯೆ ದೊಡ್ಡದಾಗಿದೆ. ಕ್ಷೇತ್ರದಲ್ಲಿ ಕಾಡಾನೆ ದಾಳಿಯಿಂದ 5 ಜನ ಮೃತಪಟ್ಟಿದ್ದಾರೆ. ನೂರಾರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ನಾಶವಾಗಿದೆ. ಅರಣ್ಯ ಇಲಾಖೆ 3 ರಿಂದ 4 ಸಾವಿರ ರೂಪಾಯಿ ನೀಡುತ್ತಿದೆ. ಶಾಸಕ ಟಿ.ಡಿ.ರಾಜೇಗೌಡರು ರೈಲ್ವೆ ಬ್ಯಾರಿಕೇಡ್ ಹಾಕಿ ಕಾಡಾನೆ ಬರದಂತೆ ಶಾಶ್ವತವಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಈವರೆಗೂ ಸಮಸ್ಯೆ ಬಗೆಹರಿಸಿಲ್ಲ. ರೇಲ್ವೆ ಬ್ಯಾರಿಕ್ಯಾಡ್ ಹಾಕಿಲ್ಲ. ಸೋಲಾರ್ ಬೇಲಿ, ಆನೆ ಕಂದಕ ನಿರ್ಮಾಣವಾಗಿಲ್ಲ ಎಂದು ದೂರಿದರು.

ಕಾಡಾನೆಗಳು ಕೊಪ್ಪ ಪಟ್ಟಣದ ಪೆಟ್ರೋಲ್ ಬಂಕ್ ಸಮೀಪಕ್ಕೆ ಬಂದು ಹೋಗಿದೆ. ಇದರಿಂದ ಜನತೆ ಭಯ ಭೀತರಾಗಿದ್ದಾರೆ. ಅರಣ್ಯ ಸಚಿವರಿಗೆ ಮಲೆನಾಡಿನ ಜನರ ಕಷ್ಟಗಳ ಅರಿವಿಲ್ಲ. ಶಾಸಕ ಟಿ.ಡಿ.ರಾಜೇಗೌಡರು ಈ ಹಿಂದೆ ಜನರಿಗೆ ಮಾತು ಕೊಟ್ಟಂತೆ ತಕ್ಷಣ ಕಾಡಾನೆಗಳನ್ನು ಸ್ಥಳಾಂತರ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕುಎಂದು ಆಗ್ರಹಿಸಿದರು.

ಶೃಂಗೇರಿ ಕ್ಷೇತ್ರದ ಎಲ್ಲ ರಸ್ತೆಯಲ್ಲೂ ಗುಂಡಿ ಬಿದ್ದು, ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಶಾಸಕ ಟಿ.ಡಿ.ರಾಜೇಗೌಡರು ರಸ್ತೆ ಗುಂಡಿ ಮುಚ್ಚಿಸಬೇಕು. ಕೆಲವು ರಸ್ತೆಗಳಲ್ಲಿ ಜನರೇ ಗುಂಡಿಗಳಿಗೆ ಮಣ್ಣು ತುಂಬಿಸುತ್ತಿದ್ದಾರೆ. ಇದರಿಂದ ರಸ್ತೆ ಮತ್ತಷ್ಟು ಹಾಳಾಗುತ್ತಿದೆ. ಕಟ್ಟಿನಮನೆ ಸೇತುವೆ, ಹೆಗ್ಗಾರ್ ಕೊಡಿಗೆ ಸೇತುವೆ ಹಾಗೂ ಬನ್ನೂರು ಸೇತುವೆ ಕುಸಿದಿದೆ. ಶೃಂಗೇರಿಗೆ ಬರಬೇಕಾದರೆ ವಸ್ತಾರೆ, ಕಣತಿ ರಸ್ತೆಯಲ್ಲೇ ಬರಬೇಕು. ಈ ರಸ್ತೆಯು ಮೂಡಿಗೆರೆ ಕ್ಷೇತ್ರಕ್ಕೆ ಸೇರಿದ್ದು ಈ ಬಗ್ಗೆ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನ ಮೋಟಮ್ಮಗೆ ಪತ್ರ ಬರೆದಿದ್ದೇನೆ. ನನ್ನ ಪತ್ರಕ್ಕೆ ಅವರು ಸ್ಪಂದಿಸಿ ರಸ್ತೆ ದುರಸ್ತಿ ಬಗ್ಗೆ ಉತ್ತರ ನೀಡಿದ್ದಾರೆ ಎಂದರು. ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಜೆಡಿಎಸ್ ಕಾರ್ಯಾಧ್ಯಕ್ಷ ಶಿವದಾಸ್, ಜೆಡಿಎಸ್ ಮುಖಂಡ ಸುಬಾನ್, ವಿಜೇಂದ್ರ ಕೋಣನಕೆರೆ, ಉಪೇಂದ್ರಗೌಡ, ಹೂವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net