

ಹಗರಿಬೊಮ್ಮನಹಳ್ಳಿ: ಸಮಾಜದ ಶಾಂತಿಗಾಗಿ ಧರ್ಮದಿಂದ ನಡೆಯಬೇಕು. ಧಾರ್ಮಿಕ ಆಚರಣೆಗಳನ್ನು ಮೈಗೂಡಿಸಿಕೊಂಡರೆ, ಸಂಸ್ಕಾರ ಬೆಳೆಯುತ್ತದೆ ಎಂದು ಬಾಚಿಗೊಂಡನಹಳ್ಳಿ ತೋಂಟದಾರ್ಯ ಮಠದ ಶ್ರೀ ಶಿವಮಹಾಂತ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ತಾಲೂಕಿನ ತಂಬ್ರಹಳ್ಳಿಯಲ್ಲಿ ನಿರ್ಮಿಸಿದ ಶ್ರೀ ಮೈಲಾರಲಿಂಗೇಶ್ವರ ಶಿಬಾರ ಕಟ್ಟೆ, ಪಾದಗಟ್ಟಿ ಹಾಗೂ ನಾಗದೇವತಾ ಮೂರ್ತಿಗಳ ಪ್ರತಿಷ್ಠಾಪನೆಯಲ್ಲಿ ಮಾತನಾಡಿದರು. ಧಾರ್ಮಿಕ ಆಚರಣೆಗಳಲ್ಲಿ ಸಾಮಾನ್ಯವಾಗಿ ಎಲ್ಲರನ್ನೂ ತೊಡಗಿಸುವುದು ಇಂದಿನ ದಿನಗಳಲ್ಲಿ ಸಾಧ್ಯವಾಗುತ್ತಿಲ್ಲ. ಮಕ್ಕಳಲ್ಲಿ ಮೊದಲು ಸಂಸ್ಕಾರ ಬೆಳೆಸಬೇಕು ಎಂದರು. ನಂದಿಪುರ ಮಠದ ಡಾ.ಮಹೇಶ್ವರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ದೇವರನ್ನು ನಂಬುವ ಒಂದು ವರ್ಗ ಮತ್ತು ವಿರೋಧಿಸುವ ಮತ್ತೊಂದು ವರ್ಗ ಇದೆ. ಎಲ್ಲ ಧರ್ಮ ಜಾತಿ, ಮತ, ಪಂಥಗಳನ್ನು ಒಗ್ಗೂಡಿಸಿ, ವಿವಿಧತೆಯಲ್ಲಿ ಏಕತೆ ಕಾಣುವುದು ನಮ್ಮ ಭಾರತದಲ್ಲಿ ಮಾತ್ರ. ಆದ್ದರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಗದ್ದಿಕೆರೆ ಹಿರೇಮಠದ ಚರಂತೇಶ್ವರ ಸ್ವಾಮೀಜಿ, ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಶ್ರೀ ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಬೆಣ್ಣಿಹಳ್ಳಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಉಪಾಧ್ಯಕ್ಷ ಎಚ್.ಬಿ.ಗಂಗಾಧರ ಗೌಡ, ಜಿ.ಪಂ.ಮಾಜಿ ಸದಸ್ಯ ಅಕ್ಕಿ ತೋಟೇಶ, ಗ್ರಾಮದ ಹಿರಿಯರಾದ ಗೌರಜ್ಜನವರ ಬಸವರಾಜಪ್ಪ, ಬಣಕಾರ ಕೊಟ್ರೇಶ, ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ ಹನುಮೇಶ, ತಾಪಂಮಾಜಿ ಸದಸ್ಯ ಪಿ.ಕೊಟ್ರೇಶ, ತಾಪಂ ನಿವೃತ್ತ ಇ.ಒ. ಟಿ.ವೆಂಕೋಬಪ್ಪ, ಪ್ರಮುಖರಾದ ವುಂಕಿ ಸಿದ್ದಪ್ಪ, ಕಡ್ಡಿ ಚನ್ನಬಸಪ್ಪ, ಮಂಜುನಾಥ ಪಾಟೀಲ, ಆರ್.ಬಸವಲಿಂಗನಗೌಡ, ಮಂಜುನಾಥ ಪಟ್ಟಣಶೆಟ್ಟಿ, ಮ್ಯಾಳ ಶಶಿಧರ, ಗುಡ್ಲನೂರು ವಸಂತಪ್ಪ, ವಿರುಪಾಕ್ಷಪ್ಪ, ರಮೇಶ, ಕರಿಬಸಪ್ಪ, ಪಿ.ವೀರೇಶ, ಸಕ್ರಗೌಡ, ಡಿ.ಎಂ.ಶಿವಮೂರ್ತಯ್ಯ, ಮುತ್ಕೂರು, ವೀರಭದ್ರಯ್ಯ ಸ್ವಾಮಿ, ಉದಯ ಭಾಸ್ಕರ್ ಇತರರಿದ್ದರು.