

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರೀ ವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಇಲ್ಲಿನ ಯಾಲಕ್ಕಿ ಶೆಟ್ಟರ್ ಕಾಲನಿ ಶಾರದಾ ಬಡಾವಣೆಯಲ್ಲಿ ನಿರ್ಮಿಸಿರುವ ನೂತನ ದೇವಸ್ಥಾನ ಉದ್ಘಾಟನಾ ಸಮಾರಂಭ ನಿಮಿತ್ತ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಬೆಳಗ್ಗೆ 8 ಗಂಟೆಯಿಂದ ವೇದಮೂರ್ತಿ ರಮೇಶ ಭಟ್ ಜೋಶಿ ಹಾಗೂ ಶ್ರೀಮನ್ ನಾರಾಯಣ ಭಟ್ ಜೋಶಿ ನೇತೃತ್ವದಲ್ಲಿ ವೇದಘೋಷದೊಂದಿಗೆ ಮಹಾ ಪುಣ್ಯಾಹ ವಾಚನೆ, ಗಣಪತಿ ಪೂಜೆ, ವರುಣ ಪೂಜೆ, ಮೃತ್ಯುಕಾ ಪೂಜೆ, ನಾಂದಿ ಸ್ಥಾಪನೆ, ಧಾನ್ಯಾಧಿವಾಸ, ಮೂರ್ತಿಗಳ ಶುದ್ಧೀಕರಣ, ಜಲಾಧಿವಾಸ, ದೇವತಾ ಸ್ಥಾಪನೆ, ಶಯ್ಯಾಧಿವಾಸ, ಪ್ರತಿಷ್ಠಾ ಪೂರ್ವಾಂಗ ಹೋಮ, ಮಹಮಂಗಳಾರತಿ ನೆರವೇರಿಸಲಾಯಿತು. ವಿವಿಧ ಮಹಿಳಾ ಮಂಡಳಿಗಳ ಸದಸ್ಯರು ಗಣಪತಿ ಸ್ತೋತ್ರ, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ ಹಾಗೂ ರುದ್ರ ಪಠಣ ಮಾಡಿದರು.
ಸಂಘ ಅಧ್ಯಕ್ಷ ಶಶಿಧರ್ ಉಜ್ಜಿನಿ, ಉಪಾಧ್ಯಕ್ಷರಾದ ಶ್ರೀಧರ ಶೇಟ್, ಕೊಟ್ರೇಶ ನಾಗಪ್ಪ ಹೂಗಾರ, ಪ್ರಧಾನ ಕಾರ್ಯದರ್ಶಿ ಅಶೋಕ ಕೋಳಕೂರ, ಶ್ರೀನಿವಾಸ ಸವಣೂರ, ಮಡಿವಾಳಪ್ಪ ಶಿರಿಯಣ್ಣವರ, ಹನುಮಂತಗೌಡ ಪಾಟೀಲ, ವಿಲಾಸ ದುಮ್ಮವಾಡ, ಮಾರುತಿ ತುಪಸುಂದರ, ಅನ್ನದಾನಪ್ಪ ಕಾಟ್ರಿಹಳ್ಳಿ, ಪ್ರಕಾಶ ಅಂತಣ್ಣವರ, ಸದಯ್ಯ ಪಾಲಭಾವಿಮಠ, ರಾಜಶೇಖರ ಅಣಗೌಡರ, ವಿಜಯ ಅಗಡಿ, ಮಹಾಂತೇಶ ಭಾವಿ, ಬಡಾವಣೆ ನಿವಾಸಿಗಳು, ಇತರರು ಇದ್ದರು.