ಾ.5ರಿಂದ 7ರವರೆಗೆ ಹಾಲ್ತಿಯಲ್ಲಿ ಧಾರ್ಮಿಕ ಕಾರ್ಯಕ್ರಮ

26 NMG 01 (5)
: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸುದ್ದಿಗೋಷ್ಟಿ ಮಾತನಾಡಿದರು.
Published on

ನಾಗಮಂಗಲ: ತಾಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರ ಹಾಲ್ತಿಯ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಆವರಣದಲ್ಲಿ ಮಾ.5 ರಿಂದ 7 ರವರೆಗೆ ಭ್ರಮರಾಂಬ ಅಮ್ಮನವರ ಸಮೇತ ಶ್ರೀ ಮಲ್ಲಿಕಾರ್ಜುನಸ್ವಾಮಿ, ಮಹಾಗಣಪತಿ, ಸುಬ್ರಹ್ಮಣ್ಯಸ್ವಾಮಿ, ಬಾಲಭೈರವೇಶ್ವರಸ್ವಾಮಿ, ಧ್ವಜಸ್ತಂಭ, ಪರಿವಾರ ದೇವತೆಗಳ ಪ್ರತಿಷ್ಠಾಪನೆ ಮತ್ತು ನೂತನ ದೇವಾಲಯದ ವಿಮಾನ ಗೋಪುರದ ಮಹಾಕುಂಭಾಭಿಷೇಕ ಜತೆಗೆ ಸಮುದಾಯ ಭವನ ಉದ್ಘಾಟನೆಯಾಗಲಿವೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಮಾ.5 ಮತ್ತು 6 ರಂದು ವಿವಿಧ ಪೂಜೆಗಳು ನಡೆಯಲಿದ್ದು, 7ರಂದು ದೇಗುಲ ಉದ್ಘಾಟನೆಯಾಗಲಿದೆ. ಶ್ರೀ ಸ್ವಾಮಿ ಅಮರಾನಂದ ಪರಮಹಂಸ ಸ್ವಾಮೀಜಿ ಅವರ ಆಶಯದಂತೆ 1200 ಚದರ ಅಡಿ ವಿಸ್ತೀರ್ಣದಲ್ಲಿ ನೂತನವಾಗಿ ದೇಗುಲ ನಿರ್ಮಿಸಲಾಗಿದೆ. ಹಾಲ್ತಿ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ ಏರಿ ದರ್ಶನ ಮಾಡಲು ಸಾಧ್ಯವಾಗದವರಿಗೆ ಅನುಕೂಲವಾಗಲಿ ಎಂದು ಬೆಟ್ಟದ ತಪ್ಪಲಿನಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಇದು ಆದಿಚುಂಚನಗಿರಿ ಮಠದ ಕಾರ್ಯವಾಗುವುದಕ್ಕಿಂತ ಭಕ್ತರ ಕಾರ್ಯವಾಗಬೇಕಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾ.7ರಂದು ದೇಗುಲ ಉದ್ಘಾಟನೆ: ಮಾ.7 ರಂದು ಗಣಪತಿ ಪೂಜೆ, ಶ್ರೀ ಹಾಲ್ತಿ ಮಲ್ಲಿಕಾರ್ಜುನಸ್ವಾಮಿ ಮತ್ತು ಪರಿವಾರ ದೇವತೆಗಳಿಗೆ ವಿಶೇಷ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ. ಮಧ್ಯಾಹ್ನ 12.30 ರಿಂದ 1 ಗಂಟೆವರೆಗೆ ಹಾಲ್ತಿ ಮಲ್ಲಿಕಾರ್ಜುನಸ್ವಾಮಿ ಮತ್ತು ಪರಿವಾರ ದೇವತೆಗಳ ಪ್ರತಿಷ್ಠಾಪನೆ ಸಹಿತ ವಿಮಾನ ಗೋಪುರದ ಮಹಾಕುಂಭಾಭಿಷೇಕ, ಗೋಪೂಜೆ, ಶೋಡಶೋಪಚಾರ ಪೂಜೆ ನಡೆಯಲಿದೆ. ನಂತರ ಆಶೀರ್ವಚನ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಗುವುದು. ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಸಚಿವರಾದ ಸಾ.ರಾ. ಮಹೇಶ್, ಸಿ.ಟಿ,.ರವಿ, ಮಾಜಿ ಶಾಸಕ ಸುರೇಶ್‌ಗೌಡ ಮತ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಪಾಲ್ಗೊಳ್ಳಲಿದ್ದಾರೆ.

ಬಡಮಕ್ಕಳಿಗಾಗಿ ಶಾಲೆ ಆರಂಭ: ಹಾಲ್ತಿ ಆದಿಚುಂಚನಗಿರಿ ಶಾಖಾ ಮಠದ ಹಿಂದಿನ ಗುರುಗಳಾದ ಶ್ರೀ ಸ್ವಾಮಿ ಅಮರಾನಂದ ಪರಮಹಂಸ ಸ್ವಾಮೀಜಿ ಅವರ ಕನಸಿನಂತೆ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅವರ ಕನಸಿನಂತೆ ಅನ್ನಪೂರ್ಣೇಶ್ವರಿ ಮತ್ತು ಬೃಹತ್ ಸಮುದಾಯ ಭವನ ನಿರ್ಮಿಸಿ ಉದ್ಘಾಟನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಬಡಮಕ್ಕಳಿಗಾಗಿ ಶಾಲೆ ಆರಂಭಿಸುವುದಾಗಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಮಾ.6ರಂದು ದಕ್ಷಬ್ರಹ್ಮ ನಾಟಕ: ಮಾ.6 ರಂದು ಸಂಜೆ 6 ಗಂಟೆಗೆ ಮೈಸೂರಿನ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ಮೂರು ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು, ಮಠದ ಭಕ್ತರು, ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀಗಳು ಮನವಿ ಮಾಡಿದರು.

ಮೈಸೂರು ಹಾಗೂ ಹಾಲ್ತಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ದೈಹಿಕ ಶಿಕ್ಷಕ ಪರಮಶಿವಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net