ವೈಭವದ ಸೀಬಾರ ಮೈಲಾರಲಿಂಗೇಶ್ವರ ಜಾತ್ರೆ

15 MYK 2
Published on

ಮಾಯಕೊಂಡ: ಮಾಯಕೊಂಡ ಹೋಬಳಿ ಪರಶುರಾಂಪುರ ಸಮೀಪದ ಸೀಬಾರ ಮೈಲಾರಲಿಂಗೇಶ್ವರ ದೇವರ ಜಾತ್ರೆಯು ಅಪಾರ ಭಕ್ತಗಣದ ನಡುವೆ ಶುಕ್ರವಾರ ಸಂಜೆ ವೈಭವದಿಂದ ಜರುಗಿತು.

ಪ್ರತಿವರ್ಷ ಶ್ರೀ ಕ್ಷೇತ್ರ ಮೈಲಾರದಲ್ಲಿ ನಡೆಯುವ ಜಾತ್ರೆಯ ದಿನದಂದೆ ಇಲ್ಲಿನ ಸೀಬಾರದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆ ಜರುಗುತ್ತದೆ.

ಶುಕ್ರವಾರ ಮುಂಜಾನೆಯೇ ದೇವಾಲಯದ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಯಿತು. ಮಧ್ಯಾಹ್ನ ಟ್ರ್ಯಾಕ್ಟರ್, ಎತ್ತಿನ ಬಂಡಿ ಹಾಗೂ ಆಟೋಗಳಲ್ಲಿ ಜನಸಾಗರವೆ ಹರಿದುಬಂದಿತು.

ಮಕ್ಕಳ ಮುಡಿ ಕೊಡುವುದು, ಮುದ್ರೆ ಹಾಕಿಸುವುದು ಸೇರಿ ಭಕ್ತರು ವಿವಿಧ ಹರಕೆ ಸಲ್ಲಿಸಿದರು.

ದೇವಾಲಯದ ಆವರಣದಲ್ಲಿ ಗೊರವಯ್ಯ ಅವರ ದೇವರ ದೋಣಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹಲವಾರು ಧಾರ್ವಿುಕ ಕಾರ್ಯಗಳು ನಡೆದವು.

ಮಾಯಕೊಂಡ, ದಿಂಡನಹಳ್ಳಿ, ಪರಶುರಾಂಪುರ, ದೊಡ್ಡ ಮಾಗಡಿ, ಹುಚ್ಚವ್ವನಹಳ್ಳಿ, ಎಚ್ ಬಸವಾಪುರ, ನಲ್ಕುಂದ, ಹಿಂಡಸಕಟ್ಟೆ, ಬಾಡ, ಅಣಬೇರು, ಕೊಡಗನೂರು ಹಾಗೂ ಹೋಬಳಿಯ ಇನ್ನೂ ಹಲವಾರು ಗ್ರಾಮಗಳ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net