ಧಾರ್ಮಿಕ ಆಚರಣೆ ಬಿಜೆಪಿಗರ ಸ್ವತ್ತಲ್ಲ: ಸಚಿವ ಎನ್.ಚಲುವರಾಯಸ್ವಾಮಿ

N.Chaluvarayaswomey
Published on

ಮೈಸೂರು: ಹಿಂದು ಧಾರ್ಮಿಕ ಆಚರಣೆ, ಗಂಗಾರತಿ, ಕಾವೇರಿ ಆರತಿ ಎಲ್ಲವೂ ಬಿಜೆಪಿಗರ ಗುತ್ತಿಗೆ ಅಲ್ಲ. ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ವಾರಾಣಸಿ, ಹರಿದ್ವಾರಗಳಲ್ಲಿ ಈ ಆಚರಣೆ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ ಎಂದು ಕಾವೇರಿ ಆರತಿ ಕಾರ್ಯಕ್ರಮ ಸಮಿತಿ ಅಧ್ಯಕ್ಷರೂ ಆದ ಕಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಗಂಗಾರತಿ, ಕಾವೇರಿ ಆರತಿ ಬಗ್ಗೆ ಬೆಜೆಪಿ ನಾಯಕರ ಹೇಳಿಕೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆಯಲ್ಲಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಹುಟ್ಟುವುದಕ್ಕಿಂತಲೂ ಮೊದಲೇ ಈ ಧಾರ್ಮಿಕ ಆಚರಣೆಗಳಿವೆ. ಯಾವ ಆಚರಣೆಯೂ ಬಿಜೆಪಿ ಬಂದ ಮೇಲೆ ಬಂದಿದ್ದಲ್ಲ. ಸಂಪ್ರದಾಯ, ಧಾರ್ಮಿಕ ಆಚರಣೆಗಳು ಬಿಜೆಪಿ ಮತ್ತು ಅಶೋಕ್ ಅವರ ಗುತ್ತಿಗೆ ಅಲ್ಲ. ಎಲ್ಲ ಪರಂಪರೆಗಳನ್ನು ಕಾಂಗ್ರೆಸ್ ಪಕ್ಷವು ಮುಂದುವರಿಸಿಕೊಂಡು ಬಂದಿರುವುದಕ್ಕೆ ಇಂದು ಬಿಜೆಪಿಯವರು ಈ ವಿಷಯವನ್ನು ಇಟ್ಟುಕೊಂಡು ಎಗರಾಡುತ್ತಿದ್ದಾರೆ. ಇದರ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಗಂಗಾರತಿ ಇರಲಿ, ದಸರಾ ಆಚರಣೆ ಇರಲಿ, ಜಾತ್ರೆಗಳಿದ್ದರೂ ಬಿಜೆಪಿಯವರು ತಮ್ಮ ಸ್ವತ್ತು ಎಂಬ ರೀತಿ ನೋಡುತ್ತಿದ್ದಾರೆ. ಇದು ಈ ನೆಲದ ವಾಸಿಗಳ ಹಕ್ಕಾಗಿದೆ. ಇದನ್ನು ಎಲ್ಲರೂ ಮಾಡುವಂತಹದ್ದಾಗಿದೆ. ಉತ್ತರ ಭಾರತದಲ್ಲಿ ಮಾಡುತ್ತಿರುವುದನ್ನು ದಕ್ಷಿಣ ಭಾರತದಲ್ಲಿ ಮಾಡಬೇಕು. ಅದನ್ನು ವ್ಯವಸ್ಥಿತವಾಗಿ ಮಾಡಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಅದನ್ನು ಅಶೋಕ್ ಅವರು ಅಭಿನಂದನೆ ಮಾಡುತ್ತಾರೆ, ಪ್ರಶಂಸೆ ವ್ಯಕ್ತಪಡಿಸುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ, ಇವರು ಹೀಗೆ ಮಾತನಾಡುತ್ತಾರೆ ಎಂದರೆ ಅದರ ಬಗ್ಗೆ ಇವರಿಗೆ ಎಷ್ಟು ಕಾಳಜಿ ಇದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಜರಿದಿದ್ದಾರೆ.

ಧಾರ್ಮಿಕ ಆಚರಣೆ ನೆಪದಲ್ಲಿ ಕಿಡಿಗೇಡಿ ಕೆಲಸ ಮಾಡಿದರೆ ಕಾನೂನು ಕ್ರಮವನ್ನು ಕೈಗೊಳ್ಳುವುದು ಆಯಾ ಸರ್ಕಾರಗಳ ಜವಾಬ್ದಾರಿಯಾಗುತ್ತದೆ. ಇದು ಅವರ ಸರ್ಕಾರ ಇದ್ದರೂ ಸರಿ, ನಮ್ಮ ಸರ್ಕಾರ ಇದ್ದರೂ ಸರಿ. ಕಾನೂನುಬಾಹಿರ ಘಟನೆಗಳು ಆದಾಗ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದು ಗಣೇಶ ಕಾರ್ಯಕ್ರಮವಾಗಲಿ ಅಥವಾ ಇನ್ಯಾವುದೇ ಕಾರ್ಯಕ್ರಮಗಳಾಗಲಿ, ಈ ನೆಲದ ಕಾನೂನನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದರೆ, ಅದನ್ನು ಹಾಗೆ ಪಾಲನೆ ಮಾಡಲಾಗಿದೆ. ಹೀಗೆ ಪಾಲನೆ ಮಾಡಲಾಗಿದೆ ಎಂದು ವ್ಯಂಗ್ಯವಾಡುವುದು ಈ ಹಿಂದೆ ಉಪಮುಖ್ಯಮಂತ್ರಿ, ಗೃಹ ಸಚಿವರಾಗಿದ್ದ ಅಶೋಕ್ ಅವರಿಗೆ ಶೋಭೆಯಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net