

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ನಮ್ಮ ಒಳ್ಳೆಯ ಕಾರ್ಯಗಳ ಜತೆ ಶ್ರೀ ರಾಘವೇಂದ್ರ ಸ್ವಾಮಿ ಆಶೀರ್ವಾದವಿದೆ. ಭಕ್ತಿಯಿಂದ ಆರಾಧಿಸುವವರ ಕುಟುಂಬ ಬೆಳಗಿದವರು ರಾಘವೇಂದ್ರ ರಾಯರು. ಮಂತ್ರಾಲಯದಂತೆ ಲಾಯಿಲದ ಶ್ರೀ ರಾಯರ ಬೃಂದಾವನ ಅಭಿವೃದ್ಧಿ ಹೊಂದುತ್ತಿದ್ದು, ಅಭಿವೃದ್ಧಿ ಕಾರ್ಯಕ್ಕೆ ಮುಂದಿನ ದಿನಗಳಲ್ಲಿ ಕನಿಷ್ಠ 20 ಲಕ್ಷ ರೂ. ನೆರವು ನೀಡುತ್ತೇನೆ ಎಂದು ಹೊಸಪೇಟೆ ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು. ಸೋಮವಾರ ಲೈಾಲ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಗುರುಪ್ರಸಾದ ಮಂಟಪ, ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಂಗಾವತಿ ಮಾಜಿ ಶಾಸಕ ಎಚ್.ಎಸ್.ಮುರಳೀಧರ್ ಮಾತನಾಡಿ ಪ್ರತಿಷ್ಠಾನದ ಸೇವಾ ಕಾರ್ಯಗಳಿಗೆ 5 ಲಕ್ಷ ರೂ. ನೀಡುವುದಾಗಿ ತಿಳಿಸಿದರು. ಶ್ರೀ ರಾಘವೇಂದ್ರ ಪ್ರತಿಷ್ಠಾನ ಅಧ್ಯಕ್ಷ ಪೀತಾಂಬರ ಹೆರಾಜೆ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಬೆಂಗಳೂರು ನಾಗನಾಥೇಶ್ವರ ದೇವಸ್ಥಾನ ಧರ್ಮದರ್ಶಿ ನಾರಾಯಣ ಬೇಗೂರು ಮಾತನಾಡಿದರು. ಸುಮಂತ್ ಕುಮಾರ್ ಜೈನ್, ಪ್ರಸಾದ್ ಶೆಟ್ಟಿ, ಎಚ್.ಆರ್.ಗವಿಯಪ್ಪ, ಎಚ್.ಎಸ್.ಮುರಳೀಧರ, ಕಿರಣ್ ಚಂದ್ರ ಪುಷ್ಪಗಿರಿ ಅವರನ್ನು ಗೌರವಿಸಲಾಯಿತು. ರಾಘವೇಂದ್ರ ಪ್ರತಿಷ್ಠಾನ ಟ್ರಸ್ಟಿ ಸುಜಿತಾ ವಿ.ಬಂಗೇರ, ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ ಉಪಸ್ಥಿತರಿದ್ದರು. ಪ್ರತಿಷ್ಠಾನದ ಸಲಹೆಗಾರ ಕುಮಾರ ಹೆಗ್ಡೆ ಪ್ರಸ್ತಾವಿಸಿದರು. ಟ್ರಸ್ಟಿ ಕೃಷ್ಣಪ್ಪ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ಸುಧಾಮಣಿ ರಮಾನಂದ ಕಾರ್ಯಕ್ರಮ ನಿರೂಪಿಸಿದರು. ವಸಂತ ಸುವರ್ಣ ವಂದಿಸಿದರು.
ಯುವ ಸಮುದಾಯ ಬೆಳೆಸಿಕೊಳ್ಳುವ ಒಳ್ಳೆಯ ವ್ಯಕ್ತಿತ್ವವೇ ಪಾಲಕರಿಗೆ ಆಸ್ತಿ. ಯುವಕರು ಧಾರ್ಮಿಕ ಶ್ರದ್ಧೆಯೊಂದಿಗೆ ಮಠ, ಮಂದಿರ, ಮಸೀದಿ, ಚರ್ಚ್ಗೆ ಹೋಗಬೇಕು. ಗುರುಗಳ ದಯೆ ಇದ್ದಲ್ಲಿ ನಾವು ಕೈಗೊಳ್ಳುವ ಕಾರ್ಯ ಯಶಸ್ವಿಯಾಗುತ್ತದೆ. ಸುಮಂತ್ ಕುಮಾರ್ ಜೈನ್ ಗುರುವಾಯನಕೆರೆ ಎಕ್ಸೆಲ್ ಕಾಲೇಜು ಅಧ್ಯಕ್ಷ