

ಶ್ರವಣಬೆಳಗೊಳ: ಇಲ್ಲಿಯ ಭಂಡಾರ ಬಸದಿಯ ಚವ್ವೀಸ ತೀರ್ಥಂಕರರಿಗೆ ಸಂಪೂರ್ಣ ಧಾಮ ಸಂಪ್ರೋಕ್ಷಣೆಯ ಪ್ರಯುಕ್ತ ಇಂದ್ರಪ್ರತಿಷ್ಠೆ, ಸರ್ವದೋಷ ಪ್ರಾಯಶ್ಚಿತ್ತದ ಸಕಲ ಧಾರ್ಮಿಕ ವಿಧಿ ವಿಧಾನಗಳನ್ನು ಆಚಾರ್ಯ ಮುನಿಗಳ ಸಾನ್ನಿಧ್ಯ ಮತ್ತು ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶ್ರದ್ಧಾ ಭಕ್ತಿಯಿಂದ ಸೋಮವಾರ ಸಂಪನ್ನಗೊಂಡಿತು.
ವಜ್ರಲೇಪನಗೊಂಡ ಖಡ್ಗಾಸನದ 24 ತೀರ್ಥಂಕರರ ಸನ್ನಿಧಿಯಲ್ಲಿ ಮಂಗಲ ಕಲಶಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಲಘು ಪಂಚಕಲ್ಯಾಣದ ಪ್ರಯುಕ್ತ ತೀರ್ಥಂಕರರಿಗೆ ಕೇವಲ ಜ್ಞಾನ ಕಲ್ಯಾಣ, ಮೋಕ್ಷ ಕಲ್ಯಾಣದ ಧಾರ್ಮಿಕ ವಿಧಿಗಳನ್ನು ಆಚಾರ್ಯರ ಮಾರ್ಗದರ್ಶನದಲ್ಲಿ ತ್ಯಾಗಿಗಳು ಪ್ರತಿಷ್ಠಾಚಾರ್ಯರು ನೆರವೇರಿಸಿದರು. ವಿವಿಧ ಮಂಗಲ ವಾದ್ಯಗಳು ನುಡಿಸುತ್ತಿದ್ದಂತೆ ಕೇಸರಿ ವಸ್ತ್ರಧಾರಿಗಳು ಕಿರೀಟ ಧರಿಸಿದ 24 ಜನ ಶ್ರಾವಕರು ಏಕ ಕಾಲದಲ್ಲಿ ತೀರ್ಥಂಕರರಿಗೆ ಜಲಾಭಿಷೇಕ ನೆರವೇರಿಸಿದರು. ನಂತರ ಕ್ಷೀರಾಭಿಷೇಕ ಅಷ್ಟಗಂಧಗಳಿಂದ ಅಭಿಷೇಕ ನಡೆದು ಪುಷ್ಪವೃಷ್ಟಿ ಮಾಡಲಾಯಿತು. ಮಹಾಶಾಂತಿಧಾರಾ ಕಲಶದೊಂದಿಗೆ ಮಹಾಮಂಗಳಾರತಿ ಮಾಡಲಾಯಿತು. 2 ದಿನಗಳಿಂದ ಭಾಗವಹಿಸಿದ್ದ ಆಚಾರ್ಯರಿಗೆ ಮತ್ತು ತ್ಯಾಗಿಗಳಿಗೆ ಅರ್ಘ್ಯ ಸಮರ್ಪಿಸಿ ಗಂಧೋದಕ ವಿತರಿಸಲಾಯಿತು.
ಧಾರ್ಮಿಕ ವೇದಿಕೆಯಲ್ಲಿ ಕ್ಷೇತ್ರದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಕ್ಷೇತ್ರದಲ್ಲಿ ನಡೆದು ಬಂದಿರುವ ಪ್ರಾಚೀನ ಪರಂಪರೆ ಉಳಿಸಬೇಕಾಗಿರುವುದರಿಂದ ಜಿನ ಮೂರ್ತಿಗಳಿಗೆ ಆಗಿದ್ದ ಭಿನ್ನಕ್ಕೆ ವಜ್ರಲೇಪನ ಮಾಡಿಸಲಾಯಿತು. ಹಾಗಾಗಿ ಧಾಮ ಸಂಪ್ರೋಷಣೆಯ ಲಘು ಪಂಚಕಲ್ಯಾಣದ ಧಾರ್ಮಿಕ ವಿಧಿ ಮತ್ತು ಅಭಿಷೇಕಗಳನ್ನು ನಡೆಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರದ ದಾನಿಗಳಿಗೆ ಮತ್ತು ಒರಿಸ್ಸಾ ರಾಜ್ಯದಿಂದ ಆಗಮಿಸಿದ್ದ ಶಿಲ್ಪಿಗಳನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.
ಪೂಜೆಯ ನೇತೃತ್ವವನ್ನು ಪ್ರತಿಷ್ಠಾಚಾರ್ಯರುಗಳಾದ ಎಸ್.ಪಿ.ಜಿನೇಶ್, ಎಸ್.ಡಿ.ನಂದಕುಮಾರ್ ಶಾಸ್ತ್ರಿ, ಪ್ರೇಂಕುಮಾರ್, ಎಸ್.ಎಸ್.ವಿಮಲ್ ಕುಮಾರ್ ವಹಿಸಿದ್ದರು.
ಆಚಾರ್ಯ ಸುವಿಧಿ ಸಾಗರ ಮಹಾರಾಜರು, ಆಚಾರ್ಯ ವರ್ಧಮಾನ ಸಾಗರ ಮಹಾರಾಜರು, ಮತ್ತು ವಿದ್ಯಾಸಾಗರ ಮಹಾರಾಜರ ಸಂಘಸ್ಥ ತ್ಯಾಗಿಗಳು, ಅರಹಂತಗಿರಿಯ ಧವಲಕೀರ್ತಿ ಸ್ವಾಮೀಜಿ, ಕನಕಗಿರಿ ಜೈನಮಠದ ಭುವನಕೀರ್ತಿ ಸ್ವಾಮೀಜಿ, ಕಂಬದಹಳ್ಳಿಯ ಬಾನುಕೀರ್ತಿ ಸ್ವಾಮೀಜಿ ಆರತಿಪುರದ ಸಿದ್ಧಾಂತಕೀರ್ತಿ ಸ್ವಾಮೀಜಿ, ಸೋಂದಾ ಜೈನ ಮಠದ ಭಟ್ಟಾಕಲಂಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.