

ಹರಪನಹಳ್ಳಿ: ಶಿವನಾರದಮುನಿ ಸಮುದಾಯ ಭವನ ನಿರ್ಮಾಣದಿಂದ ಭಕ್ತರಿಗೆ ವಿಶ್ರಾಂತಿ ಪಡೆಯಲು ಮತ್ತು ಧಾರ್ಮಿಕ ಕಾರ್ಯಕ್ರಮ ನಡೆಸಲು ಅನುಕೂಲವಾಗಲಿದೆ ಎಂದು ಚಿಗಟೇರಿ ನಾರದಮುನಿ ಸೇವಾ ಟ್ರಸ್ಟ್ ಅಧ್ಯಕ್ಷ ಅಣಬೇರು ರಾಜಣ್ಣ ಹೇಳಿದರು.
ತಾಲೂಕಿನ ಚಿಗಟೇರಿ ಗ್ರಾಮದ ಶಿವನಾರದಮುನಿ ದೇವಸ್ಥಾನದ ಬಳಿಯ ಸಮುದಾಯ ಭವನ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಸ್ವಾಮಿಯ ದರ್ಶನಕ್ಕೆಂದು ನಾಡಿನಾದ್ಯಂತ ರಥೋತ್ಸವ, ಶ್ರಾವಣದ ಕೊನೆಯ ವಾರ, ಮತ್ತು ಹುಣ್ಣಿಮೆ ಅಮಾವಾಸ್ಯೆ ಸೇರಿ ವಿಶೇಷ ದಿನಗಳಲ್ಲಿ ಭಕ್ತರು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಕೆಲವರು ಧಾರ್ಮಿಕ ಕಾರ್ಯಕ್ರಮಗಳಿಗೂ ಮುನ್ನ ದಿನವೇ ಬರುತ್ತಾರೆ. ಆದರೆ, ಅವರಿಗೆ ವಿಶ್ರಾಂತಿ ಪಡೆದುಕೊಳ್ಳಲು ಅನನುಕೂಲವಾಗುತ್ತಿತ್ತು ಅದನ್ನು ಗಮನದಲ್ಲಿಟ್ಟುಕೊಂಡು ಭವನ ನಿರ್ಮಿಸಲಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿಯ ಜೊತೆಗೆ ದೈವತ್ವ ಬದುಕಿನಲ್ಲಿ ಪಡೆದುಕೊಳ್ಳಬಹುದು ಎಂದರು.
ಸೇವಾ ಸಮಿತಿ ಕಾರ್ಯದರ್ಶಿ ಪಲ್ಲಾಗಟ್ಟಿ ಈ ನಾಗರಾಜ ಮಾತನಾಡಿ, ಯಾವುದೇ ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಯಾಗಲು ಸ್ಥಳೀಯ ಟ್ರಸ್ಟ್ ಅಥವಾ ಸಮಿತಿ ಮುಂದಾಳತ್ವ ಹೊಂದಿರುವವರು ನಿಸ್ವಾರ್ಥ ಮನೋಭಾವ ಹೊಂದಿರಬೇಕು ಎಂದರು.
ಸಮಿತಿ ಪದಾಧಿಕಾರಿಗಳಾದ ಕೆ.ಬಿ.ಬಸವಲಿಂಗಪ್ಪ, ಬಿ.ಕಲ್ಪನಹಳ್ಳಿ, ವೇದಮೂರ್ತಿ ಹುಲಿಕಟ್ಟಿ, ಮುಖಂಡರಾದ ದ್ಯಾಮನಗೌಡ, ಪಿ ಹಾಲಪ್ಪ, ಹುಣಸಿಹಳ್ಳಿ ಹನುಮಂತಪ್ಪ, ಬಳಿಗನೂರು ರಾಮನಗೌಡ, ಗಾಂಧಿನಗರ ಜಯಣ್ಣ, ಆಸಗೋಡ್ ಅಶೋಕ ಇತರರಿದ್ದರು.