

ವಿಜಯಪುರ: ಬಸವಾದಿ ಶರಣರ ವಚನಗಳಲ್ಲಿ ಬರುವ ಧರ್ಮ ಮತ್ತು ಕಾನೂನು ಬೇರೆ ಬೇರೆಯಲ್ಲ; ಬಸವಣ್ಣನವರ ವಚನಗಳೇ ಕಾನೂನು ಎಂದು ಹಿರಿಯ ನ್ಯಾಯವಾದಿ ವಿದ್ಯಾವತಿ ಅಂಕಲಗಿ ಹೇಳಿದರು.
ನಗರದ ವೀರಶೈವ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಶಿವಾನುಭಗೋಷ್ಠಿಯಲ್ಲಿ "ಶರಣರ ವಚನಗಳಲ್ಲಿ ಕಾನೂನು' ವಿಷಯ ಕುರಿತು ಅವರು ಮಾತನಾಡಿದರು.
ರಣರ ವಚನಗಳ ಮೂಲಕ ಸತ್ಯ, ಶುದ್ಧ ಕಾಯಕ, ದಾಸೋಹ ಜೊತೆಗೆ ಎಲ್ಲರಲ್ಲೂ ಮಾನವೀಯತೆ, ಸಮಾನತೆ ತಮ್ಮ ಕಾಯಕದಿಂದ ಗುರುತಿಸಿಕೊಳ್ಳಬೇಕು. ಇಂದಿನ ದೇಶದ ನ್ಯಾಯ ಸಂಹಿತೆಯಲ್ಲಿ ಕಾನೂನುಗಳ ಕಲಂಗಳು ಅಡಕವಾಗಿವೆ. ಅವು ಎಲ್ಲವೂ ಮಹಿಳೆಯರಿಗೆ ಸಮಾನತೆ ತರುವಂತಹವು. ಸಮಾಜದ ಒಳಿತಿಗಾಗಿ ರಚಿಸಿದಂತಹವು ಎಂದರು.
ಹಿರಿಯ ನ್ಯಾಯವಾದಿ ಶ್ರೀಕಾಂತ ಎಸ್. ಶಿರಡೋಣ ಮಾತನಾಡಿ, ಶರಣರ ವಚನಗಳು ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ತತ್ವಜ್ಞಾನಿಗಳ ಅನುಭವದ ನುಡಿಗಳು. ದೇಶದಲ್ಲಿ ಒಟ್ಟು 1860 ಕಾನೂನುಗಳು ಜಾರಿಯಲ್ಲಿದ್ದು, ಅವೆಲ್ಲವೂ ಶರಣರ ವಚನದಿಂದ ಬಂದದ್ದು. ವಚನಗಳು ಎಲ್ಲ ಕಾನೂನಿನ ಮೇಲೆ ಪ್ರಭಾವ ಬೀರಿವೆ ಎಂದರು.
ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ಶರಣರ ವಚನಗಳಲ್ಲಿರುವ ಸಪ್ತ ಶೀಲಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಹಿರಿಯ ನ್ಯಾಯವಾದಿ ಕೆ.ಎಫ್. ಅಂಕಲಗಿ, ಎಸ್.ಎಂ. ಕಣಬೂರ, ದೊಡ್ಡಣ್ಣ ಭಜಂತ್ರಿ, ಎಂ.ಜಿ. ಯಾದವಾಡ, ಮಹಾದೇವ ಹಾಲಳ್ಳಿ, ಜಗದೀಶ ಮೋಟಗಿ, ಎಸ್.ಎನ್. ಶಿವಣಗಿ, ಜಂಬುನಾಥ ಕಂಚ್ಯಾಣಿ, ಡಾ. ಸಂಗಮೇಶ ಮೇತ್ರಿ, ಡಾ. ರಮೇಶ ತೇಲಿ, ಶರಣಗೌಡ ಪಾಟೀಲ, ಮಲ್ಲಿಕಾರ್ಜುನ ಅಮರಣ್ಣವರ ಮತ್ತಿತರರಿದ್ದರು.
ಪ್ರಧಾನ ಕಾರ್ಯದರ್ಶಿ ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಉಪಾಧ್ಯಕ್ಷ ಸಹದೇವ ನಾಡಗೌಡರ ವಂದಿಸಿದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು.