ಶಾಶ್ವತ ಸುಖ-ಸಂತೋಷಕ್ಕೆ ಧರ್ಮವೇ ದಾರಿ

GOKARANA
Published on

ಗೋಕರ್ಣ: ಧರ್ಮ ಮಾರ್ಗದಿಂದ ಬರುವ ಸುಖ ಮತ್ತು ನಿಜಕರ್ಮ ಪ್ರೇರಿತ ಸಂತೋಷ ಯಾವತ್ತೂ ಶಾಶ್ವತವಾದ ಸುಖ-ಸಂತೋಷವಾಗಿದೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಸಂಘಟನಾ ಚಾತುರ್ಮಾಸ್ಯ ನಿಮಿತ್ತ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಹುಬ್ಬಳ್ಳಿ-ಧಾರವಾಡ, ಹಾವೇರಿ, ರಾಣೆಬೆನ್ನೂರ ಮತ್ತು ದಾವಣಗೆರೆ ವಲಯಗಳ ಶಿಷ್ಯಭಕ್ತರಿಂದ ಶನಿವಾರ ಆಯೋಜಿಸಿದ್ದ ಭಿಕ್ಷಾಸೇವೆಯಲ್ಲಿ ಶ್ರೀಗಳು ‘ಸುಖ ಬರುವ ದಾರಿ’ ಕುರಿತು ಸಂದೇಶ ಅನುಗ್ರಹಿಸಿ ಆಶೀರ್ವದಿಸಿದರು.

ಸುಖಕ್ಕೆ ಮೂರು ವಿಧ. ಸರ್ವ ಶ್ರೇಷ್ಠ ಎನ್ನಲಾಗುವ ಆತ್ಮದ ಅನುಭೂತಿಯನ್ನು ಕೊಡುವ ಸುಖ ಮೊದಲನೆಯದು. ದೇಹ ಮತ್ತು ಇಂದ್ರಿಯಗಳ ಸ್ತಬ್ಧಾನುಸಂಧಾನದಿಂದ ಧ್ಯಾನದ ಮೂಲಕ ಪಡೆಯಬಹುದಾದ ಈ ಸುಖ ಆಸ್ವಾದನೀಯವಾದುದು. ಒಳಿತು ಮಾಡಿ ಪುಣ್ಯದಿಂದ ಲಭಿಸುವ ಮಧ್ಯಮ ಸುಖ ಎರಡನೆಯದು. ಪರೋಪಕಾರ, ಯಜ್ಞ-ಯಾಗ ಮತ್ತು ದಾನ-ಮಾನಗಳಿಂದ ಈ ಸುಖವನ್ನು ಅನುಭವಿಸಬಹುದಾಗಿದೆ.

ಇನ್ನು ಮೂರನೆಯದು ಕ್ಷಣಿಕ ಸಂತೋಷ ಮತ್ತು ಸುಖದ ಭ್ರಮೆಯನ್ನು ಮಾತ್ರ ನೀಡುವ ಸುಖ. ಕೆಟ್ಟ ಕಾರ್ಯಗಳಿಂದ ಬರುವ ಈ ಸುಖ ಅತ್ಯಂತ ಕನಿಷ್ಠವಾದುದು. ಇದಕ್ಕೆ ರಾಮಾಯಣದಲ್ಲಿನ ಕೈಕೇಯಿ ಸಾರ್ವಕಾಲಿಕ ಉದಾಹರಣೆ. ಮಂಥರೆಯ ಚಾಡಿಯ ನುಡಿ ಕೇಳಿ ರಾಜಮಾತೆಯಾಗಲು ಬಯಸಿ ವಂಚನೆಯ ದಾರಿ ಹಿಡಿದ ಕೈಕೇಯಿಗೆ ಸಿಕ್ಕಿದ್ದು ತೀರಾ ಕ್ಷಣಿಕ ಮತ್ತು ಭ್ರಮಿತ ಸುಖವಾಗಿದೆ. ಕ್ಷಣಿಕ ಸುಖ-ಸಂತೋಷಕ್ಕಾಗಿ ಕೈಕೇಯಿ ಪತಿ ದಶರಥ ಮಹಾರಾಜನ ವಿಯೋಗ, ಮಗ ಭರತನಿಂದ ರಕ್ಕಸಿ ಎಂಬ ಅತಿ ಕ್ರೂರ ನಿಂದನೆ ಮತ್ತು ಸಮಸ್ತ ರಾಜ್ಯದ ಶಪಿಸುವಿಕೆಗೆ ಗುರಿಯಾಗಿ ಮುಂದಿನ ಜೀವಮಾನ ಪೂರ್ತಿ ಕೆಟ್ಟದ್ದನ್ನು ಮಾತ್ರ ಅನುಭವಿಸಬೇಕಾಯಿತು.

ಕಾರಣ ಭವಿಷ್ಯದಲ್ಲಿ ಘೋರ ದುಖಕ್ಕೆ ಕಾರಣವಾಗುವ ತಪ್ಪು ದಾರಿಯಲ್ಲಿ ಬರುವ ಕ್ಷಣಿಕ ಸುಖಕ್ಕಿಂತ ಪರೋಪಕಾರ, ದಾನ, ತಪಸ್ಸು, ಯಜ್ಞಾದಿ ಸುಕರ್ಮಗಳಿಂದ ಲಭಿಸುವ ಪರಿಪೂರ್ಣವಾದ ಸುಖ ಸರ್ವರ ಬದುಕಿನ ಪರಮೋದ್ದೇಶ ಆಗಲಿ ಎಂದು ಆಶೀರ್ವದಿಸಿದರು.

ಮರಾಠಿ ಸಮಾಜದಿಂದ ಚಾತುರ್ಮಾಸ್ಯ ಪಾದಪೂಜೆ ಸಲ್ಲಿಸಲಾಯಿತು. ಅತ್ಯುನ್ನತ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿವಿಧ ವಲಯಗಳ ಪದಾಧಿಕಾರಿಗಳಿಗೆ ಶ್ರೀಗಳು ನಿಯುಕ್ತಿಪತ್ರ ನೀಡಿದರು.

ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು ಮಾತನಾಡಿದರು. ವಿವಿವಿ ಪ್ರಾಚೀನ ವಿಜ್ಞಾನ ವಿಭಾಗ ಮುಖ್ಯಸ್ಥ ಅ.ಪು. ನಾರಾಯಣಪ್ಪ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್. ಗಣೇಶ ಭಟ್ಟ, ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮಾ, ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ ಉಪಸ್ಥಿತರಿದ್ದರು. ಆಮ್ನಾಯ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆ ಸದಸ್ಯರಿಂದ ಪಾದುಕಾ ಪಟ್ಟಾಭಿಷೇಕ ತಾಳಮದ್ದಳೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net