

ನಾಪೋಕ್ಲು: ಮನುಷ್ಯನನ್ನು ಮೃಗತ್ವದಿಂದ ಮಾನವತೆಯೆಡೆಗೆ, ಮಾನವತೆಯಿಂದ ದೈವತ್ವದೆಡೆಗೆ ಕರೆದೊಯ್ಯುವ ಶಕ್ತಿಯೇ ಧರ್ಮ ಎಂದು ಉಪನ್ಯಾಸಕ ,ಸಂಸ್ಕೃತಿ ಚಿಂತಕ ಪಟ್ಟಡ ಶಿವಕುಮಾರ್ ವಿಶ್ಲೇಷಿಸಿದರು.
ದೇವರಕೊಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಿರುವ 4ನೇ ವರ್ಷದ ನವರಾತ್ರಿ ಉತ್ಸವದಲ್ಲಿ ಸೋಮವಾರ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯನಲ್ಲಿ ಮಾನವತೆಯನ್ನು ಮೂಡಿಸಿ, ಮನುಷ್ಯನನ್ನು ದೈವತ್ವದೆಡೆಗೆ ಕರೆದೊಯ್ಯುವ ಶಕ್ತಿಯೇ ಧರ್ಮ. ಆದರೆ ಮನುಷ್ಯನನ್ನು ರಾಕ್ಷಸತ್ವದ ಕಡೆಗೆ ಕೊಂಡೊಯ್ಯುವುದು ಮತಾಂಧತೆ ಎಂದರು.
ಹಿಂದು ಧರ್ಮ ಸಕಲ ಜೀವಿಗಳಲ್ಲಿ ಹಾಗೂ ಸಮಸ್ತ ಪ್ರಕೃತಿಯಲ್ಲಿ ದೇವರನ್ನು ಕಾಣುವುದರಿಂದ ಯಾರ ನಾಶಕ್ಕೂ ಪ್ರಯತ್ನಿಸುವುದಿಲ್ಲ. ಸರ್ವೆಜನ ಸುಖಿನೋಭವಂತು, ವಸುದೈವ ಕುಟುಂಬಕಂ ಹಿಂದು ಧರ್ಮದ ತತ್ತ್ವ. ಆದರೆ ಅಧರ್ಮವನ್ನು ಅಧರ್ಮದಿಂದಲೇ ನಾಶ ಮಾಡಬಹುದು ಎಂಬುದನ್ನು ನಮ್ಮ ಪುರಾಣಗಳು ಪ್ರತಿಬಿಂಬಿಸಿವೆ ಎಂದರು.
ಹಿಂದು ಧರ್ಮ ಸೃಷ್ಟಿಯೊಂದಿಗೆ ಉಗಮಗೊಂಡಿರುವ ಸನಾತನ ಧರ್ಮವಾದ್ದರಿಂದ ಸೃಷ್ಟಿ ಇರುವವರೆಗೆ ಅದು ಶಾಶ್ವತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಹಿಂದು ಧರ್ಮ ತನ್ನ ಆಚರಣೆಗಳನ್ನು ಯಾರ ಮೇಲೂ ಬಲವಂತವಾಗಿ ಹೇರುವುದಿಲ್ಲ, ಆದರೂ ಕೆಲವರು ಸಾಮಾಜಿಕ ದೋಷಗಳನ್ನು ಹಿಂದು ಧರ್ಮದ ಮೇಲೆ ಆರೋಪಿಸಿ, ಹೀಗಳೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಡಾ.ಬೆಳ್ಯನ ರಾಘವೇಂದ್ರ ಮಾತನಾಡಿ, ವೈದ್ಯರು, ಎಂಜಿನಿಯರ್‌ಗಳು ಸಹ ತಮ್ಮ ಕೆಲಸಗಳ ಯಶಸ್ಸಿಗಾಗಿ ದೇವರನ್ನು ಪ್ರಾರ್ಥಿಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಪ್ರಯತ್ನದೊಂದಿಗೆ ದೈವ ಬಲವನ್ನು ನಂಬಬೇಕು ಎಂದು ಹೇಳಿದರು.
ಮತ್ತೊಬ್ಬ ಅತಿಥಿ ವಕೀಲ ಪುಂಡರೀಕ ಮಾತನಾಡಿ, ನಾವು ಕೆಲಸ ಆರಂಭಿಸುವ ಮೊದಲು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡುತ್ತೇವೆ. ನಮ್ಮ ಪ್ರತಿಯೊಂದು ಕೆಲಸದಲ್ಲಿ ದೇವರ ನಂಬಿಕೆ ಹಾಸು ಹೊಕ್ಕಾಗಿದೆ ಎಂದರು.
ಮದೆ ವಿಎಸ್‌ಎಸ್‌ಎನ್ ಅಧ್ಯಕ್ಷ ಅಗೋಲಿಕಜೆ ಧನಂಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಪಾಜೆ ಠಾಣಾಧಿಕಾರಿ ಸುಂದರ ಸುವರ್ಣ, ಜೋಡುಪಾಲ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ಕೇವಳ, ಮಾಜಿ ಯೋಧ ಜೋಡುಪಾಲದ ಉಮೇಶ್, ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಯಶೋಧರ, ವಿಠಲ ಇತರರು ಇದ್ದರು.