ಜೀವನದ ಮೌಲ್ಯ ವೃದ್ಧಿಗೆ ಧರ್ಮವೇ ಪ್ರಮುಖ ಮಾರ್ಗ

ಜೀವನದ ಮೌಲ್ಯ ವೃದ್ಧಿಗೆ ಧರ್ಮವೇ ಪ್ರಮುಖ ಮಾರ್ಗ
Published on

ಬೇಲೂರು: ತಾಲೂಕು ಮಹಿಳಾ ಒಕ್ಕಲಿಗರ ವೇದಿಕೆಯಿಂದ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸೋಮವಾರ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ನೇತೃತ್ವದಲ್ಲಿ 4ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು.

ಸತ್ಯನಾರಾಯಣ ಪೂಜೆ ನಂತರ ಆಶೀರ್ವಚನ ನೀಡಿ ಮಾತನಾಡಿದ ಅವರು, ಮಾನವ ಜೀವನದ ಮೌಲ್ಯ ಹೆಚ್ಚಿಸಲು ಧರ್ಮವೇ ಪ್ರಮುಖ ಮಾರ್ಗ. ಸತ್ಯ, ಧರ್ಮ, ಶಾಂತಿ, ಸಹಿಷ್ಣುತೆ ಎಂಬ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಮನಃಶಾಂತಿ ಪಡೆದುಕೊಳ್ಳಬಹುದು. ಸಮಾಜದಲ್ಲಿ ಒಗ್ಗಟ್ಟು ಮತ್ತು ಶ್ರೇಯಸ್ಸಿಗೆ ಧಾರ್ಮಿಕ ಆಚರಣೆಗಳು ಮಾದರಿಯಾಗಬೇಕು. ಅಲ್ಲದೆ ಇಂತಹ ಸಾಮೂಹಿಕ ಪೂಜೆಗಳು ಭಕ್ತರನ್ನು ಒಂದೇ ಹಾದಿಗೆ ತರಲು ಸಹಕಾರಿಯಾಗಲಿದೆಯಲ್ಲದೆ ಭಕ್ತಿಯ ಜತೆಗೆ ಸಮಾಜ ಸೇವಾ ಮನೋಭಾವನೆ ವೃದ್ಧಿಯಾಗುತ್ತದೆ ಎಂದರು.

ಇಂದಿನ ಯುವಜನತೆ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ನೈತಿಕ ಜೀವನದತ್ತ ಮುನ್ನಡೆಯಬೇಕು. ನಮ್ಮ ಮುಂದಿನ ಪೀಳಿಗೆಗೆ ಸಂಸ್ಕಾರ, ಧಾರ್ಮಿಕ ಪದ್ಧತಿಯ ಬಗ್ಗೆ ಮಾಹಿತಿ ನೀಡುವ ಕೆಲಸ ನಮ್ಮ ಮಠದ ಸದ್ಭಕ್ತರು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಸಾಮೂಹಿಕ ಲಕ್ಷ್ಮೀ ಹಾಗೂ ಮಂಗಳಗೌರಿ ವ್ರತವನ್ನು ಆಯೋಜಿಸಲಾಗುವುದು ಎಂದರು.

ಶಾಸಕ ಎಚ್.ಕೆ. ಸುರೇಶ್ ಮಾತನಾಡಿ, ಸಾಮೂಹಿಕ ಸತ್ಯನಾರಾಯಣ ಪೂಜೆ ಮಾಡುವುದರಿಂದ ಮನಸ್ಸಿಗೆ ಶಾಂತಿ-ನೆಮ್ಮದಿಯೊಂದಿಗೆ ಮನೆಯಲ್ಲಿ ಸಮೃದ್ಧಿ ವೃದ್ಧಿಸುತ್ತದೆ. ಮಹಿಳಾ ಒಕ್ಕಲಿಗರ ವೇದಿಕೆಯಿಂದ ಕಾರ್ಯಕ್ರಮ ಮಾಡುವ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುತ್ತಿದ್ದಾರೆ. ಇಂತಹ ಮಹತ್ಕಾರ್ಯಗಳನ್ನು ಮುಂದೆಯೂ ಮುಂದುವರಿಸಲಿ. ಅವರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಒಕ್ಕಲಿಗ ಮಹಿಳಾ ವೇದಿಕೆಯ ಭಾರತಿಗೌಡ, ವೀಣಾ, ಮುದ್ದಮ್ಮ, ಆಶಾ, ಮಮತಾ, ಉಷಾ, ಕವಿತಾ, ಕುಸುಮಾ, ಸುಧಾ, ಭವ್ಯಾ, ಪದ್ಮಾಕ್ಷಿ, ಕಮಲಮ್ಮ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಗಿರೀಶ್, ಕಾರ್ಯದರ್ಶಿ ಗಣೇಶ್, ಖಜಾಂಚಿ ಪುಟ್ಟಸ್ವಾಮಿಗೌಡ, ಸತೀಶ್, ಮಹೇಶ್, ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net