ಧರ್ಮ ಮನುಷ್ಯತ್ವ ಪ್ರೇರೇಪಿಸುವ ಪ್ರಮುಖ ದಾರಿ

oplus_2
ಹುಣಸೂರು ನಗರದಲ್ಲಿ ಆಯೋಜಿಸಿದ್ದ ಸ್ನೇಹ-ಮಿಲನ ಕಾರ್ಯಕ್ರಮದಲ್ಲಿ ಗಾವಗಡೆರೆ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಮಾತನಾಡಿದರು. ಫಾದರ್ ಮಾರ್ಟಿನ್, ಅಕ್ಬರ್, ಮಹಮದ್ ಹ್ಯಾರಿಸ್ ಸುಮೇರ್ ಇತರರಿದ್ದರು.
Published on

ಹುಣಸೂರು: ಎಲ್ಲ ಧರ್ಮಗಳ ಸಾರ ದಯೆ, ಕರುಣೆ ಮತ್ತು ಸತ್ಯವೇ ಹೊರತು ಅಧರ್ಮ ಸಾರಲು ಅಲ್ಲ ಎಂದು ಗಾವಡಗೆರೆ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಅಭಿಪ್ರಾಯಪಟ್ಟರು.

ಜಮಾತೆ ಇಸ್ಲಾಮಿ ಹಿಂದ್‌ನ ಹುಣಸೂರು ಶಾಖೆ ವತಿಯಿಂದ ನಗರದ ಮಹಾರಾಜ ಪಾರ್ಟಿ ಹಾಲ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಈದ್ ಸ್ನೇಹ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧರ್ಮ ಮನುಷ್ಯನಲ್ಲಿ ಮನುಷ್ಯತ್ವವನ್ನು ಪ್ರೇರೇಪಿಸುವ ಪ್ರಮುಖ ದಾರಿಯಾಗಿದೆ. ಅಧರ್ಮದಿಂದ ಏನನ್ನೂ ಸಾಧಿಸಲಾಗದು. ಈ ಭಾಗದಲ್ಲಿ ಮಸೀದಿ ಮತ್ತು ಮಂದಿರಗಳ ನಡುವೆ ಸಂಬಂಧಗಳ ಕೊರತೆಯಿದೆ. ಉತ್ತರ ಕರ್ನಾಟಕದ ಬೀದರ್, ವಿಜಯಪುರ, ರಾಯಚೂರು ಮುಂತಾದ ಭಾಗಗಳಲ್ಲಿ ಮಸೀದಿ ಮತ್ತು ಮಂದಿರಗಳು ಒಂದೇ ಕಡೆ ಇರುವುದನ್ನು ನಾವು ನೋಡುತ್ತೇವೆ. ಗೋಕಾಕದ ಶ್ರವಣ ಶ್ರೀ ಲಿಂಗೇಶ್ವರಸ್ವಾಮಿ ಮಠದಲ್ಲಿ ಮುಸ್ಲಿಮರೇ ಭಕ್ತರು. ಎಲ್ಲಿ ಸುಮಧುರ ಸಂಬಂಧಗಳು ಇರುತ್ತವೋ ಅಲ್ಲಿ ಪಕ್ವತೆ, ಪಕ್ವತೆಯ ಮೂಲಕ ಪರಿಣಾಮಕಾರಿ ಕಾರ್ಯಗಳು, ಆಲೋಚನೆಗಳು ನಿರ್ಮಾಣ ಆಗಲು ಸಾಧ್ಯ. ಅಂತಹ ಪಕ್ವತೆಯನ್ನು ಎಲ್ಲರೂ ಗಳಿಸೋಣ ಎಂದರು.

ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ಸ್‌ ಚರ್ಚ್‌ನ ಫಾದರ್ ಮಾರ್ಟಿನ್ ಮಾತನಾಡಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಿಷ್ಣುತೆ ಇದ್ದಲ್ಲಿ ದೇಶದ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಎಲ್ಲರೂ ಅರಿಯಬೇಕೆಂದರು.

ಜಮಾತೆ ಹಿಂದ್ ಇಸ್ಲಾಮಿನ ರಾಜ್ಯ ಕಾರ್ಯದರ್ಶಿ ಅಕ್ಬರ್, ಎಸಿ ಮಹಮದ್ ಹ್ಯಾರಿಸ್ ಸುಮೇರ್ ಮಾತನಾಡಿದರು. ಸಂಘಟನೆಯ ರಫೀಕ್, ಮುಸ್ತಫಾ ಸೇರಿದಂತೆ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net