

ಗೋಕರ್ಣ: ಸಮಾಜದಲ್ಲಿ ಧನಕ್ಕಿಂತ ಧರ್ಮಕ್ಕೆ ಮಹತ್ವವಿದ್ದಾಗ ಮಾತ್ರ ಸಮಾಜ ಸಂಸ್ಕಾರಯುತವಾಗುತ್ತದೆ. ಸಂಸ್ಕಾರ ಮತ್ತು ಸಂಸ್ಕೃತಿಯಿಂದ ಸಮೃದ್ಧಿಗೆ ಅರ್ಥ ಲಭಿಸುತ್ತದೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸಂದೇಶ ದಯಪಾಲಿಸಿದರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಸಂಘಟನಾ ಚಾತುರ್ಮಾಸ್ಯ ದೀಕ್ಷೆಯಲ್ಲಿರುವ ಶ್ರೀಗಳು ಬುಧವಾರ ನಡೆದ ಶ್ರೀ ರಾಮಚಂದ್ರಾಪುರ ಮಂಡಲದ ಭೀಮನಕೋಣೆ, ಪುರಪ್ಪೇಮನೆ ಮತ್ತು ಕಾನುಗೋಡು ವಲಯಗಳ ಶಿಷ್ಯಭಕ್ತರ ಭಿಕ್ಷಾಸೇವೆಯಲ್ಲಿ ಆಶೀರ್ವಚನ ಅನುಗ್ರಹಿಸಿದರು.
ಸಂಸ್ಕಾರ-ಸಂಸ್ಕೃತಿ ಇಲ್ಲದಿದ್ದರೆ ಸಮೃದ್ಧಿ ವ್ಯರ್ಥ. ಇಂತಹ ಸಮೃದ್ಧಿ ಸಮಾಜವನ್ನು ದಾರಿ ತಪ್ಪಿಸಿ ಭೋಗ ಜೀವನಕ್ಕೆ ಕಾರಣವಾಗುತ್ತದೆ. ಶ್ರೀರಾಮಚಂದ್ರಾಪುರ ಮಠದಲ್ಲಿ ಪರಂಪರೆಯಿಂದ ಧರ್ಮಕ್ಕೆ ಎತ್ತರದ ಸ್ಥಾನ. ಮೌಲ್ಯ, ಪರಂಪರೆ, ಧರ್ಮ, ಸಂಸ್ಕೃತಿ ನಮಗೆ ಪ್ರಧಾನ.ಧರ್ಮ ನಮ್ಮ ಮಠವನ್ನು ಆಳುವಂಥದ್ದು. ಇಂತಹ ಧರ್ಮ ಪ್ರಮುಖ ಮಠ ಮತ್ತು ಸಂಘಟನೆ ಇರುವುದು ನಮ್ಮ ಒಳಿತಿಗಾಗಿ ಎಂಬ ಭಾವನೆ ಸಮಾಜದಲ್ಲಿ ಸ್ಥಾಪಿತವಾಗಬೇಕು. ಸಮಾಜದಲ್ಲಿನ ಕಷ್ಟ-ಸುಖಗಳಿಗೆ ಸ್ಪಂದಿಸುವುದರಿಂದ ಈ ಭಾವನೆಯನ್ನು ಪ್ರತಿಷ್ಠಾಪಿಸಲು ಸಾಧ್ಯ. ಸಮಾಜದ ದುಃಖ ನಮ್ಮ ದುಃಖ. ಸಮಾಜದ ಖುಷಿ ನಮ್ಮ ಖುಷಿ ಎನ್ನುವ ಮನೋಭೂಮಿಕೆ ನಮ್ಮದಾಗಲಿ. ಮಕ್ಕಳು ಸುಖವಾಗಿದ್ದಾಗ ತಾಯಿ ಆನಂದಿಸುವಂತೆ ಇತರರ ಸಂತೋಷದಲ್ಲಿ ನಾವು ಸುಖವನ್ನು ಅನುಭವಿಸಬೇಕು. ಈ ಮೂಲಕ ಸಮಾಜದಲ್ಲಿ ನೊಂದವರ ಕಣ್ಣೀರೊರೆಸುವ ಕಾರ್ಯವಾಗಬೇಕು. ಕಾರಣ ಇಂತಹ ಸಂಸ್ಕಾರಯುತ ಶಿಕ್ಷಣವನ್ನು ಎಲ್ಲ ಪೋಷಕರೂ ತಮ್ಮ ಮಕ್ಕಳಿಗೆ ಕೊಡುವ ಪಣವನ್ನು ಬಾಳಲ್ಲಿ ತೊಡುವಂತಾಗಲಿ. ಆಗ ಮಾತ್ರ ಭವಿಷ್ಯದ ಸಮಾಜ ಉನ್ನತಿಯನ್ನು ಮುಟ್ಟಲು ಸಾಧ್ಯ. ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆಶ್ರಯದಲ್ಲಿ ಪದವಿ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ.
ವರ್ತಮಾನದ ಸಮಾಜಕ್ಕೆ ಅತಿ ಅಗತ್ಯವಿರುವ ಶಿಕ್ಷಣ ನೀಡುವ ಉದ್ದೇಶದಿಂದ ಇವುಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯ ಬಗ್ಗೆ ಅರಿವು, ಸಾತ್ವಿಕತೆಯ ಸಂವರ್ಧನೆಗಳ ಶಿಕ್ಷಣವನ್ನು ನೀಡಿ ಸಮಾಜವನ್ನು ಸುಮಾರ್ಗದಲ್ಲಿ ಸಾಗುವಂತೆ ಮಾಡುವುದು ವಿಶ್ವವಿದ್ಯಾಪೀಠದ ಮಹದುದ್ದೇಶವಾಗಿದೆ ಎಂದು ಶ್ರೀಗಳು ಆಶೀರ್ವಚನವಿತ್ತರು.
ಗುನಗ ಸಮಾಜ ಮತ್ತು ಹಾಲಕ್ಕಿ ಸಮಾಜದವರಿಂದ ಶ್ರೀಪಾದಪೂಜೆ ನಡೆಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು. ದಕ ಜಿಲ್ಲೆ ಪುತ್ತೂರಿನ ಹಿಂದು ಸಂಘಟಕ ಅರುಣಕುಮಾರ ಪುತ್ತಿಲ ಶ್ರೀಗಳಿಂದ ಆಶೀರ್ವಾದ ಪಡೆದರು. ಹವ್ಯಕ ಮಹಾಮಂಡಲ ಪ್ರ.ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಗೌ.ಕಾರ್ಯದರ್ಶಿ ನಾಗರಾಜ ಭಟ್ಟ ಪಿದಮಲೆ, ಸೇವಾ ಪ್ರಧಾನ ಪ್ರಸನ್ನ ಉಡುಚೆ, ಶ್ರೀರಾಮಚಂದ್ರಾಪುರ ಮಂಡಲ ಕಾರ್ಯದರ್ಶಿ ರಮೇಶ ಕಾನುಗೋಡು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ. ಭಟ್ಟ, ಕಾರ್ಯಾಲಯ ಕಾರ್ಯದರ್ಶಿ ಜಿ.ವಿ. ಹೆಗಡೆ ಮತ್ತಿತರರಿದ್ದರು.