

ಬೆಂಗಳೂರು: ಧರ್ಮ ಹಾಗೂ ಧರ್ಮ ವಿಧಿಸುವ ಸಾಮಾಜಿಕ ಕಟ್ಟುಪಾಡುಗಳು ಒಂದಕ್ಕೊಂದು ಬೇರೆಯಾಗಿದ್ದು, ಕೆಲವು ಸಲ ಧರ್ಮದಲ್ಲಿನ ನೀತಿಗಳು ನಮಗೆ ಒಪ್ಪಿಗೆ ಆಗದಿರಬಹುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಿಸಿದ್ದಾರೆ.
ಶೇಷಾದ್ರಿಪುರ ಕಾಲೇಜು ಸಭಾಂಗಣದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ ಅವರ ಆಂಗ್ಲ ಕೃತಿ ‘ಕಂಪ್ಯಾರಿಟಿವ್ ಸ್ಟಡಿ ಆ್ ಡ್ರಾಮಾಟಿಕ್ ಥಿಯರಿಸ್ ಇನ್ ಟಿ.ಎಸ್.ಎಲಿಯಟ್ ಪ್ಲೇಸ್’ ಬಿಡುಗಡೆಗೊಳಿಸಿ ಮಾತನಾಡಿದರು.
ಕುವೆಂಪು ಅವರಿಗೆ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮೌಲ್ಯಗಳ ಬಗ್ಗೆ ಬಹಳ ನಂಬಿಕೆಯಿತ್ತು. ಆದರೆ ಸಾಂಸ್ಕೃತಿಕ ಧರ್ಮಗಳ ಬಗ್ಗೆ ಸಹಮತವಿರಲಿಲ್ಲ. ಅದರಲ್ಲಿನ ಸಾಂಸ್ಕೃತಿಕ ಕಟ್ಟುಪಾಡಿನ ಬಗ್ಗೆ ವಿರೋಧವಿತ್ತು. ನಾಟಕಾರ ಟಿ.ಎಸ್. ಎಲಿಯಟ್ ಅವರು ಒಂದು ಕಾಲಘಟ್ಟದಲ್ಲಿ ಇಂಗ್ಲೀಷ್ ಸಾಹಿತ್ಯದ ಮೇರು ಪ್ರತಿಭೆಯಾಗಿದ್ದರು. ಎಲಿಯಟ್ ಅವರು ಪುನುರುತ್ಥಾನವಾದಿ ಎನ್ನುವ ಕಲ್ಪನೆಯಿಂದ ಅವರ ಕೃತಿಗಳನ್ನು ಬಂಡಾಯ, ಸಮಾಜವಾಧಿ ಚಳುವಳಿಗಾರರು ಓದುತ್ತಿರಲಿಲ್ಲ. ಆದರೆ ಎಲಿಯೇಟ್‌ರವರಿಗೆ ಧಾರ್ಮಿಕ ಮೌಲ್ಯಗಳು ಬೇರೆ, ಸಾಂಸ್ಕೃತಿಕ ಧರ್ಮಗಳು ಬೇರೆ ಎನ್ನುವ ನಂಬಿಕೆ ಇರುವುದನ್ನು ಚಿನ್ನು ಪ್ರಕಾಶ್ ಚನ್ನಾಗಿ ಬರೆದಿದ್ದಾರೆ ಎಂದರು.
ನಾಡೋಜ ಡಾ.ವೂಡೇ ಪಿ ಕೃಷ್ಣ ಮಾತನಾಡಿ, ನಮ್ಮ ಸಾಹಿತ್ಯವು ಸಮೃದ್ಧಿಯಾಗಬೇಕಾದರೆ ಬೇರೆ ಭಾಷೆಯ ಸಾಹಿತ್ಯ ಕೃತಿಗಳನ್ನು ಓದಬೇಕು. ಕುವೆಂಪುರವರು ಬಂಗಾಳಿ ಭಾಷೆಯನ್ನು ಕಲಿತು, ರವೀಂದ್ರನಾಥ ಠಾಗೋರ್‌ರವರ ಸಮಗ್ರ ಸಾಹಿತ್ಯವನ್ನು ಓದಿದ ಪರಿಣಾಮ ಅವರಲ್ಲಿ ವಿಶ್ವ ದೃಷ್ಟಿ ಬರಲು ಸಾಧ್ಯವಾಯಿತು. ಆದರೆ ಇತ್ತೀಚೆಗೆ ಕನ್ನಡ ಶಿಕ್ಷಕರು ಪಾಠ ಹೊರತಾದ ಯಾವ ಕಾರ್ಯವನ್ನು ಮಾಡುತ್ತಿಲ್ಲ. ಬೋಧನೆ ಜೊತೆಗೆ ಬರವಣಿಗೆಯನ್ನಿಟ್ಟುಕೊಂಡರೆ ಅಧ್ಯಾಪಕರಿಂದ ಹೆಚ್ಚಿನ ಕೆಲಸವಾಗುತ್ತದೆ. ಆಧ್ಯಾತ್ಮ ಎಲ್ಲಾ ಧರ್ಮದಲ್ಲೂ ಇದೆ. ಆಧ್ಯಾತ್ಮವನ್ನು ಬೆಳೆಸಿಕೊಳ್ಳುವ ಕೆಲಸ ಮಾಡಬೇಕು. ಕುವೆಂಪು ಹೇಳಿದಂತೆ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಹಾ.ವೀ.ಮಂಜುಳಾ ಶಿವಾನಂದ, ದಾಳೇಗೌಡ ಹೊಸಹಳ್ಳಿ, ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ, ಜ್ಯೋತಿ ಎಸ್.ಲಿಂಗಂಪಲ್ಲಿ ಅವರಿಗೆ ಸಾಹಿತಿ ರಾಂ.ಕೆ.ಹನುಮಂತಯ್ಯ ದತ್ತಿ ಪುಸ್ತಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಮರ್ಶಕಿ ಡಾ.ವಿ.ಭಾಗ್ಯಲಕ್ಷ್ಮೀ, ದತ್ತಿ ದಾನಿ ಹನುಮಂತಯ್ಯ, ಡಾ.ರಾಮಲಿಂಗೇಶ್ವರ, ವಿ. ರೇಣುಕಾ ಪ್ರಸನ್ನ ಮತ್ತಿತರರಿದ್ದರು.