ಮುಸ್ಲಿಮರು, ಕ್ರೈಸ್ತರಿಗೆ ಸಂವಿಧಾನಕ್ಕಿಂತ ಧರ್ಮವೇ ಮೇಲು: ರಘುನಂದನ್ ವಾಗ್ದಾಳಿ

29
Published on

ಮೈಸೂರು: ಹಿಂದುತ್ವವನ್ನು ಭಾರತೀಯ ಕಣ್ಣುಗಳಿಂದ ನೋಡಬೇಕೆ ಹೊರತು, ಅನುಮಾನದ ದೃಷ್ಟಿಯಿಂದ ಅಲ್ಲ ಎಂದು ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಹ ಸಂಯೋಜಕ ರಘುನಂದನ್ ಹೇಳಿದರು.

ಮಂಥನ ಮೈಸೂರು ವೇದಿಕೆೆಯಿಂದ ನಗರದ ಮಾಧವಕೃಪಾದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಹಿಂದುತ್ವ- ವರ್ತಮಾನದ ಸಂದರ್ಭದಲ್ಲಿ ಹಿಂದುತ್ವದ ಪ್ರಸ್ತುತತೆ’ ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧರ್ಮ, ಸಂಸ್ಕೃತಿ ಹಾಗೂ ಸಮಾಜದ ಸಮಾಗಮವೇ ಹಿಂದುತ್ವ. ಇದನ್ನು ಭಾರತೀಯ ಕಣ್ಣುಗಳಿಂದ ನೋಡಬೇಕೇ ವಿನಾ ಅನುಮಾನದ ದೃಷ್ಟಿಯಿಂದ ಅಲ್ಲ. ಹಿಂದುತ್ವ ಎನ್ನುವುದು ಗೊಂದಲವಿಲ್ಲದ, ರಾಜಿ ಇಲ್ಲದ ವಿಚಾರ. ಆರ್‌ಎಸ್‌ಎಸ್ ಹಿಂದುತ್ವ ಬೇರೆ ಅಲ್ಲ, ವಿವೇಕಾನಂದರ ಹಿಂದುತ್ವ ಬೇರೆ ಅಲ್ಲ. ಇದೆಲ್ಲ ನಮ್ಮ ಸಿದ್ಧಾಂತ ಒಪ್ಪಲಾರದವರು ಮಾಡಿದ ಕೂಟ ಎಂದರು.

ನಮ್ಮನ್ನು ನಿಂದಿಸುವಾಗ ಹಿಂದು ಎಂದು ಹೇಳಲಾಗುತ್ತಿದೆ. ಆದರೆ ಮೆಚ್ಚಿಕೊಳ್ಳುವಾಗ ಮಾತ್ರ ಹಿಂದು ಎಂದು ಹೇಳುವ ಮನಸ್ಸು ಯಾರಲ್ಲೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದುತ್ವವೇ ಬೇರೆ, ಹಿಂದೂಯಿಸಂ ಎನ್ನುವುದೇ ಬೇರೆ. ಆರ್‌ಎಎಸ್‌ಎಸ್ ಹಿಂದುತ್ವವೇ ಬೇರೆ, ವಿವೇಕಾನಂದರ ಹಿಂದುತ್ವವೇ ಬೇರೆ ಎನ್ನುವ ಹಲವಾರು ನರೇಟಿವ್‌ಗಳನ್ನು ಸೃಷ್ಟಿಸಲಾಗುತ್ತಿದೆ. ಆದರೆ, ಹಿಂದುತ್ವ ಎನ್ನುವುದಕ್ಕೆ ವಿಶಾಲವಾದ ಅರ್ಥವಿದೆ. ಜ್ಞಾನ ಪರಂಪರೆಗೆ ಮತ್ತು ವಿಕಾಸಕ್ಕೆ ನಡೆದ ಎಲ್ಲ ಪ್ರಯತ್ನಗಳೂ ಹಿಂದುತ್ವವೇ ಎಂದು ವಿವರಿಸಿದರು.

ಹಿಂದು ಎನ್ನುವ ಶಬ್ದಕ್ಕೆ ಭೂಮಿಗಿಂತಲೂ ದೊಡ್ಡ ಎನ್ನುವ ಅರ್ಥವಿದೆ. ರಿಲಿಜಿಯನ್‌ಗಳು ಮತ್ತು ಹಿಂದು ಜೀವನ ಪದ್ಧತಿಗಳ ನಡುವಿನ ಮೂಲಭೂತ ವ್ಯತ್ಯಾಸವನ್ನು ಪ್ರತಿಯೊಬ್ಬ ಹಿಂದು ಕೂಡ ಅರ್ಥೈಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಅಬ್ರಹಾಮಿಕ್ ಹೇಳಿದ್ದಾರೆ. ‘ಸೆಕ್ಯುಲರ್’ ಎನ್ನುವುದೇ ಹಿಂದುಗಳಿಗೆ ಮಾಡಿದ ದೊಡ್ಡ ಮೋಸವಾಗಿದ್ದು, ಅದರ ತಪ್ಪು ತಪ್ಪಾದ ಭಾಷಾಂತರವಂತೂ ಮತ್ತಷ್ಟು ಮೋಸಗೊಳಿಸುವುದಕ್ಕೇ ಮಾಡಿದ್ದಾಗಿದೆ ಎಂದರು.

ಹಿಂದುತ್ವಕ್ಕೆ ಪರ್ಯಾಯವಾಗಿ ನಮ್ಮಲ್ಲಿ ಆರ್ಯ, ಸನಾತನ ಮೊದಲಾದ ಶಬ್ದಗಳು ಬಳಕೆಯಲ್ಲಿವೆ. ಭಾರತ ಎಂದರೆ ಬೆಳಕನ್ನು ಆರಾಧಿಸುವವರು. ಇದೊಂದು ಸಂಸ್ಕೃತಿ ವಾಚಕ ಶಬ್ದ. ಹಿಂದು ಎಂಬುದು ಭೂಮಿ ವಾಚಕ ಶಬ್ದ. ಆದರೆ, ಅದು ಪ್ರಸ್ತುತ ಸಂಸ್ಕೃತಿ ವಾಚಕ ಆಗಿದೆ. ಯಾರು ಬೇಕಾದರೂ ಹಿಂದು ಆಗಬಹುದು. ಬೌದ್ಧ, ಜೈನ ಎಲ್ಲರೂ ಹಿಂದು. ಯಾರೂ ಬೇಕಾದರೂ ತಾನು ಹಿಂದು ಎಂದುಕೊಳ್ಳಬಹುದು. ಬುದ್ಧನಿಂದ ಹಿಡಿದು ಅಂಬೇಡ್ಕರ್‌ವರೆಗೆ ಎಲ್ಲರೂ ನಮಗೆ ಆದರ್ಶಗಳೇ ಎಂದು ವಿವರಿಸಿದರು.

ಧರ್ಮ ಯಾವಾಗಲೂ ಎಲ್ಲ ಕಾಲಕ್ಕೂ ಸಲ್ಲುವಂತಹದ್ದು. ಹೀಗಾಗಿಯೇ ಹಿಂದುಗಳು ಧರ್ಮದ ಜತೆಗೆ ಸಂವಿಧಾನವನ್ನು ಒಪ್ಪಿಕೊಂಡಿದ್ದೇವೆ. ಆದರೆ ಮುಸ್ಲಿಂಮರು, ಕ್ರೈಸ್ತರು ಈಗಲೂ ಸಂವಿಧಾನಕ್ಕಿಂತ ತಾವು ನಂಬಿರುವ ಧರ್ಮವೇ ಮೇಲು ಎನ್ನುವ ಭಾವನೆಯಲ್ಲಿ ಇದ್ದಾರೆ ಎಂದರು.

‘ಹಿಂದುತ್ವ’ ಪುಸ್ತಕವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ ಮೋಹನ್ ಭಾಗವತ್, ಸಹ ಸರಕಾರ್ಯವಾಹರಾದ ಅರುಣ್‌ಕುಮಾರ್, ಸುರೇಶ್ ಸೋನಿ ಅವರ ಮಹತ್ವಪೂರ್ಣ ಲೇಖನಗಳನ್ನು ಒಳಗೊಂಡಿದೆ.

ವಿಜಯವಿಠಲ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ವಾಸುದೇವ ಭಟ್ ಪುಸ್ತಕ ಬಿಡುಗಡೆಗೊಳಿಸಿದರು. ಪ್ರಶಾಂತ್ ಶಿವಣ್ಣ ಅವರು ಪುಸ್ತಕದ ಪರಿಚಯ ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net