

ಬೀರೂರು: ಧರ್ಮ ಶ್ರದ್ದೆ , ಎಲ್ಲದಕ್ಕೂ ಮಿಗಿಲಾದದ್ದು ಎಂಬುದನ್ನು ನಮ್ಮ ಪೂರ್ವಿಕರು ದೇವಾಲಯ ಗುಡಿ, ಗೋಪುರ ನಿರ್ಮಾಣದ ಮೂಲಕ ತಿಳಿಸಿದ್ದಾರೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ನೆಹರು ನಗರ 3ನೇ ಕ್ರಾಸ್‌ನಲ್ಲಿ ಶ್ರೀಬನಶಂಕರಿ ದೇವಿಯ ನೂತನ ದೇವಾಲಯ ಪ್ರವೇಶ, ಕಳಸ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಸೋಮವಾರ ನಡೆದ ಧಾರ್ಮಿಕ ಸಮಾರಂಭ ಉದ್ಘಾಟಸಿ ಮಾತನಾಡಿ, ಹಿಂದುಳಿದ ವರ್ಗಗಳ ಪೈಕಿ ದೇವಾಂಗ ಸಮಾಜವೂ ಒಂದು. ಚಿಕ್ಕ ಸಮುದಾಯ 1.50 ಕೋಟಿ ರೂ.ವೆಚ್ಚದಲ್ಲಿ ಸುಂದರವಾದ ದೇವಾಲಯ ನಿರ್ಮಾಣ ಮಾಡಿರುವುದು ಶ್ಲಾಘನೀಯ. ದೇವಾಲಯ ಭವ್ಯವಾಗಿರಬೇಕು ಎಂಬ ಮನೋಭಾವದಲ್ಲಿ ನಿರ್ಮಾಣಕ್ಕೆ ಸಹಕಾರ ನೀಡಿರುವುದು ಹೆಮ್ಮೆಯ ಸಂಗತಿ ಎಂದರು.
ದೇವಾಲಯ ಪ್ರಗತಿಗೆ ಅನುದಾನ ನೀಡಲಾಗಿದೆ. ಸಮುದಾಯ ಭವನ ನಿರ್ಮಾಣದ ಚಿಂತನೆಯೂ ನಡೆದಿದೆ. ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು. ಹಿಂದುಳಿದ ವರ್ಗಗಳ ದೇವಾಲಯಗಳ ನಿರ್ಮಾಣ ಹಾಗೂ ದುರಸ್ತಿಗೆ 6.50 ಕೋಟಿ ರೂ.ಅನುದಾನ ನೀಡಲಾಗಿದೆ ಎಂದರು.
ಪುರಸಭೆ ಅಧ್ಯಕ್ಷೆ ವನಿತಾ ಮಧು ಭಾವಿಮನೆ, ಹಂಪೆ ಹೇಮಕೂಟ ಟ್ರಸ್ಟ್ ಅಧ್ಯಕ್ಷ ಪಿ.ಆರ್.ಗಿರಿಯಪ್ಪ, ನಿವೃತ್ತ ಡಿಐಜಿ ಜಿ.ರಮೇಶ್, ದೇವಾಂಗ ಸಮಾಜ ಅಧ್ಯಕ್ಷ ಎಂ.ಪಿ.ಉಮಾಶಂಕರ್, ಅರೇಕಲ್ ಕಾಂತರಾಜ್, ಸಂಘದ ಅಧ್ಯಕ್ಷ ಬಿ.ಕೆ.ಲೋಕೇಶ್, ಪ್ರಧಾನ ಕಾರ್ಯದರ್ಶಿ ಇಂದ್ರಕುಮಾರ್, ಖಜಾಂಚಿ ಸುರೇಶ್‌ಬಾಬು, ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ಸಹನಾ, ದೇವಾಲಯ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ತಿಪ್ಪೇಶ್, ಖಜಾಂಚಿ ಹರೀಶ್, ಪುರಸಭೆ ಮಾಜಿ ಅಧ್ಯಕ್ಷೆ ಸವಿತಾ ರಮೇಶ್ ಇದ್ದರು.