

ದೇವನಹಳ್ಳಿ: ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರಗಳ ಜ್ಞಾನವು ಮಾನವೀಯ, ಸದ್ಗುಣ, ಉತ್ತಮ ಚಿಂತನೆಗಳು ಮತ್ತು ಪರೋಪಕಾರ ಶಿಕ್ಷಣದೊಂದಿಗೆ ಬರುತ್ತದೆ. ಭಾರತೀಯ ಶಿಕ್ಷಣ ವ್ಯವಸ್ಥೆಯು ಪ್ರಾಚೀನ ಕಾಲದಿಂದಲೂ ‘ವಸುಧೈವ ಕುಟುಂಬಕಂ’ ತತ್ವದ ಮೇಲೆ ಕೇಂದ್ರೀಕೃತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಪಟ್ಟಣದ ಹೊರವಲಯದ ಪಾರಿವಾಟಗುಟ್ಟದಲ್ಲಿನ ದಕ್ಷಿಣ ಭಾರತದ ಅತೀ ದೊಡ್ಡ ಶ್ರೀ ಸ್ಥೂಲಭದ್ರ ಜೈನ ತೀರ್ಥ ಆದಿನಾಥ ಜೈನ ತೀರ್ಥಂಕರರ ದೇವಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ಜೈನ ತೀರ್ಥಂಕರ ವೃಷಭನಾಥ ತೀರ್ಥಂಕರರ ಜನ್ಮ ಕಲ್ಯಾಣೋತ್ಸವ ಸ್ನಾತ್ರ ಮಹೋತ್ಸವ ಮತ್ತು ಅಭಿಷೇಕೋತ್ಸವದಲ್ಲಿ ಮಾತನಾಡಿ, ಆಧುನಿಕ ಜ್ಞಾನವನ್ನು ಮೌಲ್ಯಗಳೊಂದಿಗೆ ಸಂಯೋಜಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ, ಅದು ಜಗತ್ತಿಗೆ ಹೊಸ ದಿಕ್ಕನ್ನು ನೀಡುವುದಲ್ಲದೆ ಇಡೀ ಮಾನವಕುಲಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದರು.
ಶ್ರೀ ಸ್ಥೂಲಭದ್ರ ಸೂರೀಶ್ವರ ಮಹಾರಾಜ್ ಅವರು ಮಹಾನ್ ಸದ್ಗುಣಿ ಪ್ರಶಾಂತ ಮೂರ್ತಿ, ಪರಿಪೂರ್ಣ ವ್ಯಕ್ತಿ. ಅವರಿರುವೆಡೆ ಲಕ್ಷ್ಮೀ ಮತ್ತು ಸರಸ್ವತಿ ಇಬ್ಬರೂ ವಾಸಿಸುತ್ತಿದ್ದರು. ಅವರು ಸಹಜ-ಆಧ್ಯಾತ್ಮಿಕ ಯೋಗಿಯಾಗಿದ್ದರು. ದೇವನಹಳ್ಳಿಯ ಪುಣ್ಯಕ್ಷೇತ್ರದಲ್ಲಿ ಶ್ರೀ ಸಿದ್ಧಾಚಲ ಸ್ಥೂಲಭದ್ರ ಧಾಮ ಅದ್ಭುತವಾದ ಧಾರ್ಮಿಕೇಂದ್ರವಾಗಿದೆ. ದಕ್ಷಿಣ ಕೇಸರಿ ಆಚಾರ್ಯ ಶ್ರೀ ಸ್ಥೂಲಭದ್ರ ಸೂರೀಶ್ವರ ಜೀ ಮಹಾರಾಜ್ ಅವರ ಆಶೀರ್ವಾದ ಮತ್ತು ಅವರ ಶಿಷ್ಯರಾದ ಆಚಾರ್ಯ ಶ್ರೀ ಚಂದ್ರಯಶ ಸೂರೀಶ್ವರಜಿ ಮಹಾರಾಜ್‌ರ ದೃಷ್ಟಿ ಮತ್ತು ದಿವ್ಯ ಚಿಂತನೆಯ ಪ್ರಭಾವದಿಂದ ಜಿನಾಲಯಗಳ ದರ್ಶನ ಮತ್ತು ತೀರ್ಥಯಾತ್ರೆಗಳು ನಡೆಯುತ್ತಿವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಜೈನ ಮಂದಿರದ ಶ್ರೀ ಚಂದ್ರಯಶ್ ಸೂರೀಶ್ವರಜೀ ಮಾತನಾಡಿ, ಜೈನಧರ್ಮ ಅಹಿಂಸಾ ಪ್ರತಿಪಾದಕ ಧರ್ಮವಾಗಿದ್ದು, ಇದರಲ್ಲಿ 24 ತೀರ್ಥಂಕರರನ್ನು ಪೂಜಿಸಲಾಗುತ್ತದೆ. ಮೂಲ ಮಹಾಪುರುಷರಾದ ಆದಿನಾಥ ಜೈನರಾದ ವೃಷಭನಾಥರು ಮೊದಲ ತೀರ್ಥಂಕರರು. ಅವರ ಜಯಂತಿಯನ್ನು ಈ ಶುಭ ದಿನ ಆಚರಿಸಲಾಗುತ್ತಿದೆ. ಮಹಾವೀರ ಜೈನರು 24 ನೇ ತಿರ್ಥಂಕರರು ಎಂದರು.
ಸಚಿವ ಕೆ.ಎಚ್.ಮುನಿಯಪ್ಪ ಭಾಗಿಯಾಗಿ ವಿಶೇಷ ಪೂಜೆ ಆರತಿ ಸೇವೆ ಸಲ್ಲಿಸಿದರು. ಈ ವೇಳೆ ತಹಸೀಲ್ದಾರ್ ಬಾಲಕೃಷ್ಣ, ಬಯಪ ಅಧ್ಯಕ್ಷ ವಿ.ಶಾಂತಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರಸನ್ನಕುಮಾರ್, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸಿ.ಜಗನ್ನಾಥ್, ಪುರಸಭೆ ಅಧ್ಯಕ್ಷ ಮುನಿಕೃಷ್ಣ, ಸದಸ್ಯರಾದ ಎನ್.ರಘು, ಸುಮಿತ್ರಾ ಮಂಜುನಾಥ್, ಪುರಸಭೆ ಕಂದಾಯ ಅಧಿಕಾರಿ ಎ.ಮಂಜುನಾಥ, ಪರಮ ಪೂಜ್ಯ ಜೈನ ಆಚಾರ್ಯ ಶ್ರೀ ಚಂದ್ರಯಶ ಸೂರೀಶ್ವರಜಿ ಮಹಾರಾಜ್, ಪ್ರಧಾನ ಟ್ರಸ್ಟಿ ಪ್ರಕಾಶ್ ಜಿ ಕೊಠಾರಿ, ಇಂದರಚಂದ್‌ಜಿ, ಸುರೇಶಚಂದ್ ಜೀ, ಜಯಚಂದ್‌ಜೀ ಚುತ್ತರ್, ಚಂಪಾಲಾಲ್ ಜೀ ಬಾಪನ, ಶ್ರೀ ಬೋರಾ ಶ್ರೀ ಧರ್ಮಿಚಂದ್ ಗೌತಮ್‌ಜಿ ವೇದಮುತ, ಸುರೇಶಜೀ ವೇದಮುತಾ, ಯೋಗೇಶ್ ಪಿ ಷಾ, ಸಚಿನ್ ಬೋೀರ‌್ವಾಲ್, ಮ್ಯಾನೇಜರ್ ನಂಜೇಗೌಡ,
ಅಬಿನಂಧನ್ ಇತರರು ಇದ್ದರು.