

ಅವಿನಾಶ್ ಜೈನಹಳ್ಳಿ ಮೈಸೂರು
ಜಿಲ್ಲೆಯಲ್ಲಿ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಿಂದ ಒಟ್ಟು 9 ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಬರದ ಛಾಯೆಯಲ್ಲಿ ಸಿಲುಕಿರುವ ರೈತರಿಗೆ ಕೊಂಚ ಅನುಕೂಲವಾಗಲಿದೆ.
ಒಂದೆಡೆ ಬರ ಪರಿಸ್ಥಿತಿ ಕಾಡುತ್ತಿದೆ. ಮುಂಗಾರು ಹಂಗಾಮಿನಲ್ಲಿ ಸರಿಯಾಗಿ ಮಳೆಯಾಗದ ಕಾರಣ ಹಿಂಗಾರಿನಲ್ಲಿ ಬಿತ್ತನೆ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ರೈತರು ಬರಗಾಲ ಪರಿಣಾಮ ಸಂಭವನೀಯ ನಷ್ಟದಿಂದ ಪಾರಾಗಲು ಅನುಕೂಲವಾಗುವಂತೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮಂಜೂರಾತಿ ನೀಡಿದೆ.
ಬೇಸಿಗೆ ಹಂಗಾಮಿನ ಬೆಳೆಗಳಿಗೂ ಬೆಳೆ ವಿಮೆ ಮಾಡಿಸಲು ಅವಕಾಶ ನೀಡಲಾಗಿತ್ತು. ಇದೀಗ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ, ನಾಟಿಯಾಗಿರುವ ಟೊಮ್ಯಾಟೊ, ಮಳೆಯಾತ್ರಿತ ರಾಗಿ, ಕಡಲೆ, ಹುರುಳಿ, ಮುಸುಕಿನ ಜೋಳ ಹಾಗೂ ನೀರಾವರಿ ಆಶ್ರಿತ ರಾಗಿ, ಮುಸುಕಿನ ಜೋಳ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಬೆಳೆ ನಷ್ಟದಿಂದ ಪಾರಾಗಲು ತಪ್ಪದೆ ಬೆಳೆ ವಿಮೆ ಮಾಡಿಕೊಳ್ಳುವಂತೆ ಕೃಷಿ ಇಲಾಖೆ ಮನವಿ ಮಾಡಿದೆ. ಬೇಸಿಗೆ ಹಂಗಾಮಿನಲ್ಲಿ ರಾಗಿ, ಭತ್ತದ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.
ತಾಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಮತ್ತು ಇತರ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಧಿಸೂಚಿಸಿ, ಬೆಳೆ ವಿಮೆ ಅನುಷ್ಠಾನಗೊಳಿಸಲು ಸರ್ಕಾರ ಮಂಜೂರಾತಿ ನೀಡಿದೆ. ಬೆಳೆಸಾಲ ಪಡೆಯುವ ರೈತರಿಗೆ ಬ್ಯಾಂಕ್‌ನಿಂದಲೇ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಲಾಗುತ್ತಿದೆ. ಆದರೆ, ಬೆಳೆ ಸಾಲ ಪಡೆಯದ ರೈತರಿಗೆ ಆಯ್ಕೆ ಐಚ್ಛಿಕವಾಗಿದೆ.
ರೈತರು ಅರ್ಜಿಯೊಂದಿಗೆ ಆರ್‌ಟಿಸಿ/ಪಹಣಿ, ಕಂದಾಯ ರಸೀದಿ, ಖಾತಾಪುಸ್ತಕ, ಪಾಸ್‌ಬುಕ್, ಆಧಾರ್ ಕಾರ್ಡ್ ಪ್ರತಿಯನ್ನು ನೀಡಿ ಬೆಳೆ ವಿಮೆ ಮಾಡಿಸಿಕೊಳ್ಳಬಹುದು. ಅಧಿಸೂಚಿಸಿರುವ ಬೆಳೆಗಳಿಗೆ ವಿಮಾ ಪ್ರಸ್ತಾವನೆ ಸಲ್ಲಿಸಲು ಒಂದೊಂದು ಬೆಳೆಗೆ ಒಂದೊಂದು ದಿನಾಂಕದವರೆಗೆ ಅವಕಾಶ ಕಲ್ಪಿಸಲಾಗಿದೆ. ಡಿ. 1ರಂದು ಆರಂಭವಾಗಿ ಡಿ.15 ಬೆಳೆ ವಿಮೆ ಮಾಡಿಸಲು ಕಡೆಯ ದಿನಾಂಕವಾಗಿದೆ.
ಮಳೆಯಾಶ್ರಿತ ರಾಗಿ, ಹುರಳಿ ಹಾಗೂ ಕಡಲೆ ಬೆಳೆಗಳ ವಿಮೆಯನ್ನು ಡಿ.1ರ ಒಳಗೆ ಮಾಡಿಸಬೇಕಿದೆ. ಟೊಮ್ಯಾಟೊ, ಮಳೆಯಾಶ್ರಿತ ಮುಸುಕಿನ ಜೋಳ, ನೀರಾವರಿ ಆಶ್ರಿತ ಮುಸುಕಿನ ಜೋಳ, ರಾಗಿ ಬೆಳೆಗಳ ವಿಮೆಯನ್ನು ಡಿ.15ರ ಒಳಗೆ ಮಾಡಿಸಬೇಕಿದೆ. ಇನ್ನು ಬೇಸಿಗೆ ಹಂಗಾಮಿನ ನೀರಾವರಿ ಆಶ್ರಿತ ರಾಗಿ ಮತ್ತು ಭತ್ತದ ಬೆಳೆಗಳ ವಿಮೆ ಮಾಡಿಸಲು ಫೆ.28ರ ವರೆಗೆ ಅವಕಾಶ ನೀಡಿದೆ.
ಬ್ಯಾಂಕ್‌ಗಳು, ಸಾಮಾಜಿಕ ಸೇವಾ ಕೇಂದ್ರಗಳು(ಸಿಎಸ್‌ಸಿ ಸೆಂಟರ್), ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ನಿಗದಿತ ಸಮಯ ದೊಳಗೆ ರೈತರು ವಿಮಾ ಕಂತು ಪಾವತಿಸಿ ಬೆಳೆ ವಿಮೆಗೆ ಪ್ರಸ್ತಾವನೆ ಸಲ್ಲಿಸಿ, ನೋಂದಣಿ ಮಾಡಿಸಿಕೊಳ್ಳಬಹುದು. ಬೆಳೆ ವಿಮೆಗೆ ನೋಂದಾಯಿಸಲು ಎಫ್‌ಐಡಿ (ಫಾರ್ಮರ್ ರಿಜಿಸ್ಪ್ರೇಷನ್ ಆ್ಯಂಡ್ ಯುನಿಫೈಡ್ ಬೆನಿಫಿಷಿಯರಿ ಇನ್ಫರ್ಮೇಷನ್ ಸಿಸ್ಟಮ್) ಸಂಖ್ಯೆ ಹೊಂದಿರುವುದು ಕಡ್ಡಾಯ. ಒಂದು ವೇಳೆ ಎಫ್‌ಐಡಿ ಸಂಖ್ಯೆ ಹೊಂದಿರದಿದ್ದಲ್ಲಿ ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಆಧಾರ್ ಸಂಖ್ಯೆ ಮತ್ತು ಆರ್‌ಟಿಸಿ ವಿವರಗಳನ್ನು ಸಲ್ಲಿಸಿ ಎಫ್‌ಐಡಿ ಸಂಖ್ಯೆ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.
ಪ್ರತಿ ಎಕರೆ ಮುಸುಕಿನ ಜೋಳಕ್ಕೆ(ನೀರಾವರಿ) 26,103.15 ರೂ. ವಿಮಾ ಮೊತ್ತ ನಿಗದಿಯಾಗಿದ್ದು, 391.55 ರೂ.ಗಳನ್ನು ರೈತರು ವಿಮಾ ಕಂತು ಪಾವತಿಸಬೇಕು. ಮಳೆಯಾತ್ರಿತ ಮುಸುಕಿನ ಜೋಳಕ್ಕೆ 22,865.55 ರೂ. ವಿಮಾ ಮೊತ್ತ ನಿಗದಿಯಗಿದ್ದು, 342.98 ರೂ.ಗಳನ್ನು ರೈತರು ವಿಮಾ ಕಂತು ಪಾವತಿಸಬೇಕು.
ಹಾಗೆಯೆ, ನೀರಾವರಿಯ ರಾಗಿ ಬೆಳೆಗೆ 20,538.53 ರೂ. ವಿಮಾ ಮೊತ್ತವಿದ್ದು, 308.08 ರೂ. ವಿಮಾ ಕಂತು ಕಟ್ಟಬೇಕು. ಮಳೆಯಾತ್ರಿತ ರಾಗಿ ಬೆಳೆಗೆ 17,199.75 ರೂ. ವಿಮಾ ಮೊತ್ತವಿದ್ದು, 258 ರೂ. ವಿಮಾ ಕಂತು ಕಟ್ಟಬೇಕು. ಕಡಲೆ ಬೆಳೆಗೆ 14,063.33 ರೂ. ವಿಮಾ ಮೊತ್ತವಿದ್ದು, 210.95 ರೂ. ವಿಮಾ ಕಂತು ಕಟ್ಟಬೇಕು. ಹುರುಳಿ ಬೆಳೆಗೆ 8,296.35 ರೂ. ವಿಮಾ ಮೊತ್ತಕ್ಕೆ ನಿಗದಿಯಾಗಿದ್ದು, ರೈತರು 124.45 ರೂ. ವಿಮಾ ಕಂತು ಕಟ್ಟಬೇಕು. ಟೊಮ್ಯಾಟೊ ಬೆಳೆಗೆ 57,265.05 ರೂ. ವಿಮಾ ಮೊತ್ತವಿದ್ದು, 2863.25 ರೂ. ವಿಮಾ ಕಂತನ್ನು ರೈತರು ಪಾವತಿಸಬೇಕಿದೆ.
ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿನ ಟೊಮ್ಯಾಟೊ , ಮಳೆಯಾತ್ರಿತ ರಾಗಿ, ಕಡಲೆ, ಹುರುಳಿ ಮುಸುಕಿನ ಜೋಳ ಹಾಗೂ ನೀರಾವರಿ ಆಶ್ರಿತ ರಾಗಿ, ಮುಸುಕಿನ ಜೋಳ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಬೆಳೆ ನಷ್ಟದಿಂದ ಪಾರಾಗಲು ತಪ್ಪದೆ ಬೆಳೆ ವಿಮೆ ಮಾಡಿಕೊಳ್ಳಬೇಕು. ಇದರಿಂದ ರೈತರು ಆರ್ಥಿಕ ನಷ್ಟದಿಂದ ಪಾರಾಗಬಹುದು.ಡಾ.ಬಿ.ಎಸ್.ಚಂದ್ರಶೇಖರ್ ಜಂಟಿ ಕೃಷಿ ನಿರ್ದೇಶಕ