ಹೆಬ್ಬಾಳ ಜಂಕ್ಷನ್‌ನಲ್ಲಿ ಟ್ರಾಫಿಕ್ ಜಾಮ್‌ಗೆ ಮುಕ್ತಿ?; ನಾಳೆಯಿಂದ ಮಾರ್ಗ ಮಾರ್ಪಾಡು..

Ravikanthe Gowda
Published on

ಬೆಂಗಳೂರು: ಹೆಬ್ಬಾಳ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಸಂಚಾರ ಮಾರ್ಗವನ್ನು ಮಾರ್ಪಾಡು ಮಾಡಲಾಗಿದೆ. ಶುಕ್ರವಾರ (ಜು.8) ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬರಲಿದೆ. ಏರ್‌ಪೋರ್ಟ್ ಏಲಿವೇಟೆಡ್ ಕಾರಿಡಾರ್‌ನಿಂದ ಸರ್ವಿಸ್ ರಸ್ತೆ ಮತ್ತು ಸರ್ವಿಸ್ ರಸ್ತೆಯಿಂದ ಏಲಿವೇಟೆಡ್ ಕಾರಿಡಾರ್‌ಗೆ ಪ್ರವೇಶ ಮಾಡುವುದನ್ನು ನಿರ್ಬಂಧಿಸಲಾಗಿದೆ.

ಹೆಬ್ಬಾಳ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಸುಗಮ ಸಂಚಾರಕ್ಕಾಗಿ ವೈಜ್ಞಾನಿಕವಾಗಿ ಅಧ್ಯಯನ ನಡೆಸಲಾಗಿದೆ. ಜಂಕ್ಷನ್‌ನಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಆಧರಿಸಿ ಬಿಬಿಎಂಪಿ, ಬಿಎಂಆರ್‌ಸಿಎಲ್, ಎನ್‌ಎಚ್‌ಎಐ ಇಲಾಖೆಗಳ ಸಹಯೋಗದಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ. ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

ಪ್ರತಿದಿನ 53,498 ವಾಹನಗಳು ನಗರ ಪ್ರವೇಶ ಮಾಡುತ್ತಿವೆ. ಕೆ.ಆರ್.ಪುರ ಕಡೆಯಿಂದ 42,980 ವಾಹನಗಳು ಮತ್ತು ಯಲಹಂಕ ಕಡೆಯಿಂದ ತುಮಕೂರಿಗೆ 23,644 ವಾಹನಗಳು ಸಂಚರಿಸಲಿವೆ. ಹೆಬ್ಬಾಳ ಜಂಕ್ಷನ್‌ನಲ್ಲಿ ಪ್ರತಿದಿನ 3 ಲಕ್ಷಕ್ಕೂ ಹೆಚ್ಚಿನ ವಾಹನಗಳು ಸಂಚರಿಸಲಿದೆ. ಇದು ಸಿಲಿಕಾನ್ ಸಿಟಿಯಲ್ಲಿ ಬಹುದೊಡ್ಡ ಟ್ರಾಫಿಕ್ ಜಾಮ್ ಜಂಕ್ಷನ್ ಆಗಿದೆ. ಅದಕ್ಕಾಗಿ ಸುಗಮ ಸಂಚಾರಕ್ಕಾಗಿ ಕೆಲ ಮಾರ್ಪಾಡು ತರಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು. ಶುಕ್ರವಾರದಿಂದ ಜಾರಿಗೆ ಬರಲಿದೆ. ವಾಹನ ಸವಾರ, ಚಾಲಕರಿಗೆ ಗೊಂದಲ ಆಗದಂತೆ ಕೆಲವೇಡೆ ಮಾರ್ಗ ಸೂಚಿಸುವ ಲಕಗಳನ್ನು ಅಳವಡಿಸಲಾಗುತ್ತದೆ. ಶುಕ್ರವಾರ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಬ್ಬಾಳ ಜಂಕ್ಷನ್‌ನಲ್ಲಿ ಬಸ್‌ಗಳ ನಿಲುಗಡೆ ಸ್ಥಳ ಬದಲಾವಣೆ, ರಸ್ತೆ ದಾಟಲು ಪಾದಚಾರಿಗಳಿಗೆ ಅನುಕೂಲ ಮಾಡಲಾಗುತ್ತದೆ. ಅಡ್ಡಾದಿಡ್ಡಿ ಬಸ್ ನಿಲುಗಡೆ ನಿಷೇಧ ಮುತಾಂದ ಕ್ರಮಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತದೆ. | ಡಾ. ಬಿ.ಆರ್. ರವಿಕಾಂತೇಗೌಡ ಜಂಟಿ ಪೊಲೀಸ್ ಆಯುಕ್ತ(ಸಂಚಾರ)

  • ಯಲಹಂಕ, ಕೊಡಿಗೇಹಳ್ಳಿ, ಕೆಂಪಾಪುರ, ಜಕ್ಕೂರು ಇತ್ಯಾದಿ ಕಡೆಗಳಿಂದ ಸರ್ವಿಸ್ ರಸ್ತೆಯ ಮೂಲಕ ನಗರಕ್ಕೆ ತೆರಳುವ ವಾಹನಗಳು ನೇರವಾಗಿ ಹೆಬ್ಬಾಳ ಪ್ಲೈಓವರ್‌ಗೆ ಪ್ರವೇಶಿಸುವಂತಿಲ್ಲ.
    ಬದಲಿಗೆ ಹೆಬ್ಬಾಳ ಸರ್ಕಲ್‌ನಲ್ಲಿರುವ ಲೂಪ್ ರ‌್ಯಾಂಪ್‌ನ್ನು ಬಳಸಿ ನಗರಕ್ಕೆ ಪ್ರವೇಶಿಸಬಹುದು.
  • ಏರ್‌ಪೋರ್ಟ್ ಏಲಿವೇಟೆಡ್ ಕಾರಿಡಾರ್‌ನಿಂದ ಬೆಂಗಳೂರು ನಗರದ ಕಡೆಗೆ ಬರುವ ಬಸ್‌ಗಳು ಹೆಬ್ಬಾಳ ಸರ್ಕಲ್‌ನಲ್ಲಿ ಬಸ್ ಪ್ರಯಾಣಿಕರನ್ನು ಬಸ್ ಬೇನಲ್ಲಿ ಲೂಪ್‌ರ‌್ಯಾಂಪ್‌ಗಿಂತ ಮೊದಲು ಹತ್ತಿಸಿಕೊಳ್ಳಬೇಕು.
  • ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಹೆದ್ದಾರಿಯಿಂದ ನಗರಕ್ಕೆ ಚಲಿಸುವ ವಾಹನಗಳು ಮೊದಲಿನಂತೆ ಹೆಬ್ಬಾಳ ಪ್ಲೈಓವರ್ ಮೂಲಕ ನಗರ ಪ್ರವೇಶಿಸಬಹುದು.
  • ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಹೆದ್ದಾರಿಯಿಂದ ಕೆ.ಆರ್.ಪುರ, ತುಮಕೂರು ಕಡೆಗೆ ಚಲಿಸುವವರು ಮೊದಲಿನಂತೆ ಸರ್ವಿಸ್ ರಸ್ತೆ ಮೂಲಕ ಹೋಗಲು ಅನುವು ಮಾಡಲಾಗುತ್ತದೆ.
  • ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಹೆದ್ದಾರಿ ಮೂಲಕ ಕೆಂಪಾಪುರಕ್ಕೆ ಹೋಗುವವರು ವಿದ್ಯಾಶಿಲ್ಪ/ ಯಲಹಂಕ ಬೈಪಾಸ್ ಬಳಿ ಸರ್ವಿಸ್ ರಸ್ತೆಯನ್ನು ಬಳಸುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net