

ಮುಧೋಳ: ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆರೆ ಸಂತ್ರಸ್ತರಿಗೆ ಸ್ಪಂದಿಸಿ ತಕ್ಷಣ ಹತ್ತು ಸಾವಿರ ಹಣವನ್ನು ಸಂತ್ರಸ್ತರಿಗೆ ಪರಿಹಾರ ರೂಪದಲ್ಲಿ ನೀಡಿ, ಬಿದ್ದ ಮನೆಗಳಿಗೆ ಐದು ಲಕ್ಷ ರೂ. ಘೋಷಿಸಿದ್ದರು. ಅದರಂತೆ ಈಗಿ ಸರ್ಕಾರವೂ ಬಿದ್ದ ಮನೆಗಳ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿ ತಕ್ಷಣ ಪಾವತಿಸಬೇಕೆಂದು ಮಾಜಿ ಸಚಿವ ಅರವಿಂದ ಬೆಲ್ಲದ ಹೇಳಿದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಪ್ರವಾಹ ಸ್ಥಳಕ್ಕೆ ಮಂತ್ರಿಗಳು ಹಾಗೂ ಸ್ಥಳೀಯ ಶಾಸಕರು ಭೇಟಿ ನೀಡಿ ಕೇವಲ ಆಶ್ವಾಸನೆ ಕೊಟ್ಟು ಹೋಗುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮರು ಜೀವ ಕೊಟ್ಟ ಜಿಲ್ಲೆಗೆ ಭೇಟಿಯಾಗದೆ ಮುಡಾ ಹಗರಣ ಮುಚ್ಚಿ ಹಾಕಲು ಬೆಂಗಳೂರಿನಲ್ಲಿದ್ದಾರೆ. ಮುಖ್ಯಮಂತ್ರಿಗಳು ತಕ್ಷಣ ರಾಜ್ಯ ಪ್ರವಾಸ ಕೈಗೊಂಡು ಸಂತ್ರಸ್ತರ ಅಳಲು ಕೇಳಬೇಕಿದೆ. ತಾಲೂಕಿನಲ್ಲಿ ಪ್ರತಿ ಬಾರಿಯ ಪ್ರವಾಹದಿಂದಾಗಿ ಪರಿತಪಿಸುವ ಗ್ರಾಮೀಣ ಹಾಗೂ ನಗರ ಜನತೆಯ ಗೋಳಿಗೆ ಪೂರ್ಣವಿರಾಮ ಹಾಕುವ ನಿಟ್ಟಿನಲ್ಲಿ ಯಾದವಾಡ ಹಾಗೂ ಚಿಚಖಂಡಿ ಸೇತುವೆ ಎತ್ತರ ಹೆಚ್ಚಿಸಲು ಸರ್ಕಾರ ಮುಂದಾಗಬೇಕು. ಈ ಕುರಿತು ನಮ್ಮ ಸಂಸದರು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಯಾದವಾಡ ಹಾಗೂ ಚಿಚಖಂಡಿ ಸೇತುವೆ ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಗಮನಕ್ಕೆ ತಂದರೆ ಖಂಡಿತವಾಗಿ ನಾನು ಹಾಗೂ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಸಮ್ಮುಖದಲ್ಲಿ ಸೇತುವೆ ಎತ್ತರಕ್ಕೆ ಕ್ರಮಕೈಗೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಟಿ. ಪಾಟೀಲ, ಗ್ರಾಮೀಣ ಘಟಕದ ಅಧ್ಯಕ್ಷ ಸಂಗನಗೌಡ ಪಾಟೀಲ, ಕರಬಸಯ್ಯ ಹಿರೇಮಠ, ಅರುಣ ಕಾರಜೋಳ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾರಾಯಣ(ರಾಜು) ಯಡಹಳ್ಳಿ, ನಾಗಪ್ಪ ಅಂಬಿ, ಬಂಡು ಘಾಟಗೆ, ಸಂತೋಷಗೌಡ ಪಾಟೀಲ, ಶ್ರೀಕಾಂತ ಗುಜ್ಜನವರ, ವಿವೇಕಾನಂದಗೌಡ ಪಾಟೀಲ ಇತರರಿದ್ದರು.