

ಮೂಲ್ಕಿ: ಕಿನ್ನಿಗೋಳಿ ಮೂಲ್ಕಿ ರಾಜ್ಯ ಹೆದ್ದಾರಿ ಕುಬೆವೂರು ರೈಲ್ವೆ ಮೇಲ್ಸೇತುವೆ ಹಾಗೂ ಕುಬೆವೂರು ಅಪಾಯಕಾರಿ ತಿರುವು ಬಳಿ ಕಳೆದ ಒಂದು ತಿಂಗಳಿಂದ ಅಮೃತ್ 2.0 ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಮಳೆಯಿಂದ ಸ್ಥಗಿತಗೊಂಡಿತ್ತು. ಪೈಪ್‌ಲೈನ್‌ಗೆ ತೋಡಿ ಹೊಂಡ ಮುಚ್ಚದೆ ಪ್ರಾಣಾಪಾಯ ಆಹ್ವಾನಿಸುತ್ತಿದೆ ಎಂಬ ಪತ್ರಿಕೆ ವರದಿಗೆ ಎಚ್ಚೆತ್ತ ಗುತ್ತಿಗೆದಾರರು ಕೂಡಲೇ ಕಾರ್ಯಪ್ರವೃತ್ತರಾಗಿ ಎರಡು ಕಡೆಗಳಲ್ಲಿ ಜೆಸಿಬಿ ಮೂಲಕ ತಾತ್ಕಾಲಿಕ ನೆಲೆಯಲ್ಲಿ ಹೊಂಡ ಮುಚ್ಚಿದ್ದಾರೆ ಹಾಗೂ ಸ್ಥಳದಲ್ಲಿ ಕೆಂಪು ರಿಬ್ಬನ್ ಕಟ್ಟಿ ಬ್ಯಾರಿಕೇಡ್‌ಗಳನ್ನು ಇರಿಸಿ ಅಪಾಯ ಸಂಭವಿಸದಂತೆ ಎಚ್ಚರಿಕೆ ವಹಿಸಿದ್ದಾರೆ.
ಈ ಭಾಗದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿಯಲ್ಲಿ ಮಳೆ ನೀರು ಹರಿದು ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು ಹೆದ್ದಾರಿ ಇಲಾಖೆ ರಸ್ತೆ ದುರಸ್ತಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.