ಹೂವು ಬೆಳೆಗಾರರಿಗೆ ಪರಿಹಾರ ; ಅರ್ಜಿ ಸಲ್ಲಿಸಲು 28 ಕೊನೇ ದಿನ

26flower1c-Web
ಗೋಕಾಕ ತಾಲೂಕಿನ ರಾಜಾಪುರ ಗ್ರಾಮದ ರೈತ ಸುಭಾಷ ಗಿಡ್ಡಾಳಿ ತಮ್ಮ ಹೊಲದಲ್ಲಿ ಚೆಂಡು ಹೂ ಬೆಳೆದಿರುವುದು. –
Published on

ತುಮಕೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಹೂವು ಬೆಳೆಗಾರರಿಗೆ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದ್ದು, ಹೂವಿನ ಬೆಳೆಗಾರರಿಗೆ ಗರಿಷ್ಟ 1 ಹೆಕ್ಟೇರ್‌ಗೆ 25 ಸಾವಿರ ರೂಪಾಯಿ ಪರಿಹಾರ ದೊರೆಯಲಿದೆ.

ಕರೊನಾ ಭೀತಿಯಿಂದ ದೇಶವ್ಯಾಪಿ ಲಾಕ್‌ಡೌನ್ ಜಾರಿಯಾದ ಸಂದರ್ಭದಲ್ಲಿ ಹೂ ಬೆಳೆಯುವ ರೈತರು ಮಾರುಕಟ್ಟೆ ಇಲ್ಲದೆ ಮಕಾಡೆ ಮಲಗಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹೂ ಬೆಳೆಗಾರರು ಪರಿಹಾರಕ್ಕಾಗಿ ಹಲವು ಬಾರಿ ಸರ್ಕಾರವನ್ನು ಒತ್ತಾಯಿಸಿದ್ದರು. ಅಂತಿಮವಾಗಿ ಸರ್ಕಾರವೇ ಹೂ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ ಪರಿಹಾರಧನ ಘೋಷಿಸಿದೆ. 2019-20ನೇ ಸಾಲಿನ ಬೆಳೆ ಸಮೀಕ್ಷೆಯಲ್ಲಿ ಹೂಬೆಳೆಗಾರರ ಪಟ್ಟಿಯಲ್ಲಿ ಇರದೇ ಇರುವ ಬೆಳೆಗಾರರು ಅಗತ್ಯ ದಾಖಲೆಗಳೊಂದಿಗೆ ತಾಲೂಕು ತೋಟಗಾರಿಕೆ ಕಚೇರಿಯಲ್ಲಿ ಅರ್ಜಿ ಪಡೆದು ಸೂಕ್ತದಾಖಲಾತಿಗಳೊಂದಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು.

ಈ ಹಿಂದಿನ ಸಾಲಿನ ಬೆಳೆ ಸಮೀಕ್ಷೆಯಲ್ಲಿದ್ದ ಹೂ ಬೆಳೆಗಾರರು ಮತ್ತೊಮ್ಮೆಪರಿಹಾರಕ್ಕೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಅಲ್ಲದೆ, ಮಾ.24ರ ನಂತರ ನಾಟಿ ಮಾಡಿರುವ ಹೂ ಬೆಳೆಗಾರರಿಗೆ ಪರಿಹಾರ ಸಿಗುವುದಿಲ್ಲ. ಅದರೊಳಗೆ ನಾಟಿ ಮಾಡಿ ಲಾಕ್‌ಡೌನ್ ಸಂದರ್ಭದಲ್ಲಿ ಮಾರುಕಟ್ಟೆ ತಲುಪಿಸಲಾಗದೆ ನಷ್ಟ ಅನುಭವಿಸಿರುವ ಹೂ ಬೆಳೆಗಾರರು ಮೇ 16 ರಿಂದ ಅರ್ಜಿ ಪಡೆದು 28ರೊಳಗೆ ಅರ್ಜಿ ಸಲ್ಲಿಸಬಹುದು.

ಜಂಟಿ ಸಮೀಕ್ಷೆ: ರೈತರ ತಾಕುಗಳನ್ನು ಹೋಬಳಿಮಟ್ಟದ ಜಂಟಿ ಸಮೀಕ್ಷೆ ಸಮಿತಿಗಳೊಂದಿಗೆ ಪರಿಶೀಲಿಸಿದ ಬಳಿಕ ಪರಿಹಾರಧನ ಬಿಡುಗಡೆ ಮಾಡಲಾಗುವುದು. ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಹಾಗೂ ಗ್ರಾಪಂ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯು ಸಮೀಕ್ಷೆ ಕಾರ್ಯ ನಡೆಸಲಿದೆ.

ನರೇಗಾದಲ್ಲಿ ಕೂಲಿ...: ನಗರ ಪ್ರದೇಶಗಳಲ್ಲಿನ ಗ್ರಾಮಾಂತರ ಕೂಲಿ ಕಾರ್ಮಿಕರು ಗ್ರಾಮಗಳಿಗೆ ಹಿಂದಿರುಗುತ್ತಿದ್ದು, ಅಂತಹವರಿಗೆ ಅವರು ವಾಸಸ್ಥಳದಲ್ಲಿಯೇ ನರೇಗಾ ಯೋಜನೆ ಅನ್ವಯ ಸ್ವ ಗ್ರಾಮದಲ್ಲೇ ಕೂಲಿಗೆ ಅವಕಾಶ ಕಲ್ಪಿಸಲಾಗಿದೆ. ಕೂಲಿ ಕಾರ್ಮಿಕರಿಗೆ ದಿನವೊಂದಕ್ಕೆ 275 ರೂ. ನಿಗದಿಗೊಳಿಸಿದ್ದು, ನೇರವಾಗಿ ಅವರ ಖಾತೆಗೆ 15ದಿನಗಳೊಳಗಾಗಿ ಜಮೆ ಮಾಡಲಾಗುವುದು. ಒಂದು ಕುಟುಂಬಕ್ಕೆ 100 ದಿನಗಳ ಕಾಲ ಕೂಲಿ ಒದಗಿಸುತ್ತಿದ್ದು, ಕೂಲಿ ಪಡೆಯುವ ಬಗ್ಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಗ್ರಾಮ ಪಂಚಾಯಿತಿಗಳು ಅಥವಾ ತಾಲೂಕು ಪಂಚಾಯಿತಿ ಕಾರ್ಯಾಲಯ ಸಹಾಯವಾಣಿ ಸಂಖ್ಯೆ: 0816-2277503 ಅಥವಾ 1800425266 ಮಾಹಿತಿ ಪಡೆಯುವಂತೆ ತುಮಕೂರು ಕಾರ್ಯನಿರ್ವಾಹಣಾಧಿಕಾರಿ ಜಯಪಾಲ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲೂಕುವಾರು ರೈತರು ಸಂಪರ್ಕಿಸಲು: ತುಮಕೂರು-9945792725, ಗುಬ್ಬಿ-9686056705, ಕುಣಿಗಲ್-9448660766, ತಿಪಟೂರು-9964791910, ಚಿಕ್ಕನಾಯಕನಹಳ್ಳಿ-9538272964, ತುರುವೇಕೆರೆ-9448416334, ಶಿರಾ-9945735297, ಕೊರಟಗೆರೆ- 9535781963, ಮಧುಗಿರಿ-9448448970, ಪಾವಗಡ- 9844042356.

ಹೂ ಬೆಳೆಗಾರರಿಗೆ ಪರಿಹಾರ ಧನ ಘೋಷಿಸಿದ್ದು, ಕಳೆದ ಸಾಲಿನ ಬೆಳೆ ಸಮೀಕ್ಷೆ ಪಟ್ಟಿಯಲ್ಲಿ ಇಲ್ಲದ ರೈತರು ಆಧಾರ್, ಪಹಣಿ, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ , ಬೆಳೆಯ ಸ್ವಯಂ ದೃಢೀಕರಣದೊಂದಿಗೆ ಅರ್ಜಿ ಸಲ್ಲಿಸಬಹುದು. 2019-20ನೇ ಸಾಲಿನ ಹೂವಿನ ಬೆಳೆಗಾರರ ಸಮೀಕ್ಷೆ ಪಟ್ಟಿಯನ್ನು ವಿವಿಧ ಕಚೇರಿಗಳಲ್ಲಿ ಪ್ರಕಟಿಸಲಾಗುವುದು. ರಘು ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net