

ಬೈಲಹೊಂಗಲ: ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿಯಿಂದ ಕಳಪೆ ಸೋಯಾಬೀನ್ ಬೀಜಗಳನ್ನು ಬಿತ್ತಿದ ಪರಿಣಾಮ ರೈತರು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ನಾಗನೂರ ಗ್ರಾಮದ ರೈತರು ಸೋಮವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ತಾ.ಪಂ. ಸದಸ್ಯ ರವಿ ಗದಗ ಮಾತನಾಡಿ, ಗುಣಮಟ್ಟದ ಬೀಜಗಳಿವೆ ಎಂದು ತಿಳಿದು ಪ್ರಮಾಣೀಕರಿಸಿ ಪಿಕೆಪಿಎಸ್‌ನಿಂದ ವಿತರಿಸಲಾಗಿತ್ತು. ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಬಹುತೇಕ ರೈತರು ಬಿತ್ತನೆ ಮಾಡಿದ್ದಾರೆ. ಆದರೆ, ಬೀಜ ಕಳಪೆಯಾಗಿದ್ದರಿಂದ ಮೊಳಕೆ ಬಂದಿಲ್ಲ. ಜೂ. 9ರಂದು ಜಿಲ್ಲಾ ಮಟ್ಟದ ಕೃಷಿ ಅಧಿಕಾರಿಗಳು ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ಪರಿಹಾರ ಕೊಟ್ಟಿಲ್ಲ ಎಂದು ಆರೋಪಿಸಿದರು. ಪ್ರತಿ ಎಕರೆಗೆ 40 ಸಾವಿರ ರೂ. ನಂತೆ ಪರಿಹಾರ ಧನ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಶ್ರೀಶೈಲ ದೇಸಾಯಿ, ಈರಣ್ಣ ಬಸವರಾಜ ತೋರಣಗಟ್ಟಿ, ಅರ್ಜುನ ನಡುವಿನಮನಿ, ಮಲ್ಲೇಶ ಕುರಗುಂದ, ಶಾಂತವ್ವ ತೋರಣಗಟ್ಟಿ ಇದ್ದರು.