

ಕಳಸ: ತಾಲೂಕಿನಾದ್ಯಂತ ಆಗಸ್ಟ್ ಮೊದಲನೇ ವಾರದಲ್ಲಿ ಸುರಿದ ಮಹಾ ಮಳೆಗೆ ಅನ್ನದಾತರ ಅನ್ನದ ಬಟ್ಟಲಲ್ಲಿ ಮರಳು, ಮಣ್ಣು ತುಂಬಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಉಂಟಾದ ನೆರೆಯಿಂದ ಭತ್ತದ ಗದ್ದೆ ಹಾನಿಗೆ ಹೆದರದ ರೈತರು ಈ ಬಾರಿ ಮತ್ತೆ ಗದ್ದೆ ಹದ ಮಾಡಿ ನಾಟಿ ಮಾಡಿದವರಿಗೆ ಈ ಬಾರಿಯೂ ನೆರೆ ಬಂದು ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ತಾಲೂಕಿನಲ್ಲಿ ಕಳೆದ ಬಾರಿ 500 ಹೆಕ್ಟೇರ್ ಭತ್ತದ ಬೆಳೆ ಹಾನಿಯಾಗಿತ್ತು. ಈ ಬಾರಿ 120 ಹೆಕ್ಟೇರ್ ಪ್ರದೇಶಸ ಬೆಳೆ ಹಾನಿಯಾಗಿದೆ.
ಕೋಣೆಬೈಲು, ಕೆಳಬೈಲು, ಕಲ್ಮಕ್ಕಿ, ಚಿಂತಾಳಿ, ಹೆಮ್ಮಕ್ಕಿ, ಕಲ್ಕೋಡು, ಹಿರೇಬೈಲು ಮುಂತಾದ ಗ್ರಾಮಗಳಲ್ಲಿ ರೈತ ಕುಟುಂಬಗಳು ಅಧಿಕ ಖರ್ಚು ಕಡಿಮೆ ಇಳುವರಿ, ಪ್ರಾಣಿಗಳ ಕಾಟದ ಮಧ್ಯೆಯೂ ಭತ್ತ ಬೆಳೆಯುತ್ತಿದ್ದರು. ಕೆಲವರು ಕುಟುಂಬಕ್ಕಾಗುವಷ್ಟು ಬೆಳೆಯುತ್ತಿದ್ದರೆ ಇನ್ನು ಕೆಲವರು ಮಾರಾಟಕ್ಕೂ ಬೆಳೆಯುತ್ತಿದ್ದರು. ಈ ಬಾರಿ ಮತ್ತೆ ಮಳೆ ಇವೆಲ್ಲವನ್ನೂ ಕಿತ್ತುಕೊಂಡಿದೆ. ಧರೆಗಳು ಜರಿದು ಭತ್ತದ ಗದ್ದೆಗಳಲ್ಲಿ, ತೋಟಗಳಲ್ಲಿ ಹೂಳು ತುಂಬಿದೆ. ಆಸು ಪಾಸಿನ ಹಳ್ಳಗಳಿಂದ ಬಂದಿರುವ ನೀರು ಗದ್ದೆಗಳಲ್ಲಿ ಹರಿದು ಸಸಿಗಳು ಕೊಚ್ಚಿಕೊಂಡು ಹೋಗಿವೆ.
ಲಾಭ ಇಲ್ಲದೆ ಇದ್ದರೂ ಸಾಂಪ್ರದಾಯಿಕ ಕೃಷಿ ಉಳಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ನೆರೆಯಿಂದ ಹಾನಿಯಾಗಿದ್ದು, ಈ ಬಾರಿಯಾದರೂ ಸೂಕ್ತ ಪರಿಹಾರ ನೀಡಬೇಕು ಎಂಬುದು ರೈತರ ಒತ್ತಾಯ