ಬಿಡುಗಡೆ ಆಗಿದ್ದ ವ್ಯಕ್ತಿಗೆ ಮತ್ತೆ ಕರೊನಾ

corona
Published on

ಬೆಳಗಾವಿ: ಕರೊನಾ ಸೋಂಕು ತಗುಲಿದ್ದರಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ವ್ಯಕ್ತಿಯೊಬ್ಬರಲ್ಲಿ ಮತ್ತೆ ಕರೊನಾ ಸೋಂಕು ಕಾಣಿಸಿಕೊಂಡಿದೆ.

ಮೂಲತಃ ಗೋವಾದ, ಸದ್ಯ ಕುಡಚಿಯಲ್ಲಿ ವಾಸಿಸುತ್ತಿದ್ದ ರೋಗಿ ಸಂಖ್ಯೆ 298 ಅವರಿಗೆ ದೆಹಲಿಗೆ ಹೋಗಿ ಬಂದವರ ಸಂಪರ್ಕದಿಂದ ಸೋಂಕು ತಗುಲಿತ್ತು. ಜಿಲ್ಲಾಸ್ಪತ್ರೆಯಲ್ಲಿ ಏ.14ರಂದು ಅದು ದೃಢಪಟ್ಟಿತ್ತು. 14 ದಿನಗಳ ಚಿಕಿತ್ಸೆ ನಂತರ, 2ನೇ ಬಾರಿ ಸಂಗ್ರಹಿಸಿದ್ದ ಗಂಟಲು ದ್ರವದ ಮಾದರಿಯ ವರದಿ ನೆಗೆಟಿವ್ ಬಂದಿತ್ತು.

ಗುಣಮುಖರಾದ ಅವರನ್ನು ಮೇ 5ರಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ, ರಾಯಬಾಗ ಸರ್ಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ವ್ಯವಸ್ಥೆಯಲ್ಲಿ ಇಡಲಾಗಿತ್ತು. ಆದರೆ, ಬಿಡುಗಡೆಗೂ ಮುನ್ನ 3ನೇ ಬಾರಿ ಸಂಗ್ರಹಿಸಿದ್ದ ಗಂಟಲು ದ್ರವ ಮಾದರಿಯ ವರದಿ 5ರಂದು ತಡರಾತ್ರಿ ಪಾಸಿಟಿವ್ ಬಂದಿದೆ. ಹಾಗಾಗಿ, 6ರಂದು ಮತ್ತೆ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿರುವ ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ.

ಒಂದೂ ಪ್ರಕರಣ ಪಾಸಿಟಿವ್ ಇಲ್ಲ: ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ ಕರೊನಾ ಪ್ರಕರಣ ಪತ್ತೆಯಾಗಿಲ್ಲ. ಲಾಕ್‌ಡೌನ್ ಸಡಿಲಿಕೆ ನಂತರ ಇನ್ನೇನು ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ ಎನ್ನುತ್ತಿರುವಾಗಲೇ, ಭಾನುವಾರ ಒಂದೇ ದಿನ 22 ಪ್ರಕರಣ ದೃಢಪಟ್ಟಿದ್ದವು. ಕರೊನಾ ಸೋಂಕಿತರ ಸಂಖ್ಯೆ 85ರಿಂದ 107ಕ್ಕೆ ಏರಿಕೆಯಾಗಿ ಜನರಲ್ಲಿ ಆತಂಕ ಹೆಚ್ಚಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net