

ರಾಯಚೂರು: ಖಾಸಗಿ ನ್ಯೂಸ್ ಚಾನಲ್‌ನ ವರದಿಗಾರರನ್ನು ಬಂಧಿಸಿರುವ ಪಶ್ವಿಮ ಬಂಗಾಳದ ಸರ್ಕಾರದ ಕ್ರಮವನ್ನು ಖಂಡಿಸಿ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿಗೆ ಮನವಿ ಸಲ್ಲಿಸಿ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಕರ್ತವ್ಯ ಪತ್ರಕರ್ತನನ್ನು ಬಂಧಿಸುವ ಮೂಲಕ ಮಾಧ್ಯಮ ಸ್ವಾತಂತ್ರ ಹರಣ ಮಾಡಿದ್ದು, ಕೂಡಲೇ ಬಂತ ಪತ್ರಕರ್ತನನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಪತ್ರಕರ್ತರ ಮೇಲೆ ನಿರಂತರ ಹಲ್ಲೆ, ಕೊಲೆ ಪ್ರಕರಣಗಳು ನಡೆಯುತ್ತಿರುವುದು ಅಘಾತಕಾರಿಯಾಗಿದ್ದು, ಪತ್ರಕರ್ತರ ರಕ್ಷಣೆಗೆ ಸೂಕ್ತ ಕಾನೂನು ರೂಪಿಸಬೇಕು. ಮುಕ್ತ ಪತ್ರಿಕೋದ್ಯಮಕ್ಕೆ ಅವಕಾಶ ನೀಡುವ ಮೂಲಕ ಮಾಧ್ಯಮಗಳ ಸ್ವಾತಂತ್ರವನ್ನು ಕಾಪಾಡಬೇಕು.
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಮಾಧ್ಯಮ ಸಮಿತಿಯ ಸಭೆಗಳನ್ನು ನಡೆಸಿ ಪತ್ರಕರ್ತರ ಸಮಸ್ಯೆಗಳನ್ನು ಆಲಿಸುವ ಕೆಲಸವಾಗುತ್ತಿಲ್ಲ. ಕೂಡಲೇ ನಿಯಮಿತವಾಗಿ ಸಮಿತಿ ಸಭೆ ನಡೆಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಆರ್.ಗುರುನಾಥ, ಪದಾಕಾರಿಗಳಾದ ಶಿವಮೂರ್ತಿ ಹಿರೇಮಠ, ದತ್ತು ಸರ್ಕಿಲ್, ಕೆ.ಸತ್ಯನಾರಾಯಣ, ವಿಜಯ ಜಾಗಟಗಲ್, ಶಿವಪ್ಪ ಮಡಿವಾಳರ, ಬಸವರಾಜ ನಾಗಡದಿನ್ನಿ, ರೇಂದ್ರ ಕುಲಕರ್ಣಿ, ಭೀಮೇಶ ಪೂಜಾರ್, ಮಲ್ಲಿಕಾರ್ಜುನ ಸ್ವಾಮಿ, ವೆಂಕಟೇಶ ಹೂಗಾರ, ರಂಗನಾಥ, ವೀರನಗೌಡ, ಬಿ.ಎ.ನಂದಿಕೋಲಮಠ, ಅಮರೇಶ ಕಲ್ಲೂರ, ದುರ್ಗೇಶ, ಅಬ್ದುಲ್ ಖಾದರ್, ರಾಚಯ್ಯ ಸ್ವಾಮಿ, ನಾಗರೆಡ್ಡಿ ಪಾಲ್ಗೊಂಡಿದ್ದರು.