

ರಾಯಚೂರು: ದೇವದಾಸಿ ಮಹಿಳೆಯರಿಗೆ ಬಾಕಿಯಿರುವ ನಾಲ್ಕು ತಿಂಗಳ ಪಿಂಚಣಿ ಬಿಡುಗಡೆಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ರಾಜ್ಯ ಮಹಿಳಾ ಒಕ್ಕೂಟದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ರಾಜ್ಯದಲ್ಲಿನ ವಿಮುಕ್ತ ದೇವದಾಸಿಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಮರ್ಪಕವಾಗಿ ಪಿಂಚಣಿ ಬಾರದಿರುವುದು ಜೀವನ ನಡೆಸಲು ಕಷ್ಟವಾಗಿದೆ ಎಂದು ದೂರಿದರು.
ಅನೇಕ ತಿಂಗಳಿಂದ ದೇವದಾಸಿಯರಿಗೆ ಪಿಂಚಣಿ ಬಿಡುಗಡೆಯಾಗುತ್ತಿಲ್ಲ. ಕೂಡಲೇ ಬಿಡುಗಡೆಗೆ ಕ್ರಮಕೈಗೊಳ್ಳಬೇಕು. ಸರ್ಕಾರದ ಪಟ್ಟಿಯಿಂದ ಬಿಟ್ಟು ಹೋದ ದೇವದಾಸಿ ಮಹಿಳೆಯರ ಹೆಸರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು.
ದೇವದಾಸಿ ಮಹಿಳೆಯರ ಮಕ್ಕಳಿಗೆ ವಸತಿ ನಿಲಯ, ಹೆಚ್ಚುವರಿ ವಿದ್ಯಾರ್ಥಿ ವೇತನ, ಸ್ವಯಂ ಉದ್ಯೋಗ ಮಾಡಲು ರಿಯಾಯಿತಿ ದರದಲ್ಲಿ ಸಾಲ ನೀಡಬೇಕು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಒಕ್ಕೂಟದ ಪದಾಕಾರಿಗಳಾದ ವಿದ್ಯಾ ಪಾಟೀಲ್, ಮೋಕ್ಷಮ್ಮ, ವಿರುಪಮ್ಮ, ಹುಲಿಗೆಮ್ಮ, ಮಲ್ಲಮ್ಮ, ತಾಯಮ್ಮ, ಜಯಂತಿ ಪಾಲ್ಗೊಂಡಿದ್ದರು.