ನಮ್ಮ ಮಕ್ಕಳನ್ನು ಜೈಲಿನಿಂದ ಬಿಡುಗಡೆಗೊಳಿಸಿ

cm hubballi
Published on

ಹುಬ್ಬಳ್ಳಿ: ‘ನಮ್ಮ ಮಕ್ಕಳನ್ನು ಆದಷ್ಟು ಬೇಗ ಜೈಲಿನಿಂದ ಬಿಡುಗಡೆಗೊಳಿಸಿ’ ಎಂದು ಹಳೇ ಹುಬ್ಬಳ್ಳಿ ಗಲಭೆ ಘಟನೆಯಲ್ಲಿ ಬಂಧಿತರಾದ ಯುವಕರ ಪಾಲಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಆಗ್ರಹಿಸಿದರು.

ಸಿಎಂ ಆದ ಬಳಿಕ ಮಂಗಳವಾರ ಮೊದಲ ಬಾರಿ ಹುಬ್ಬಳ್ಳಿಗೆ ಆಗಮಿಸಿದ್ದ ಅವರನ್ನು ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿ ಕಣ್ಣೀರು ಹಾಕಿದರು.

ಗೌಂಡಿ, ಬಾರ್ ಬೆಂಡಿಂಗ್, ಪ್ಲಂಬಿಂಗ್, ಟೈಲ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ 20ರಿಂದ 25 ವಯಸ್ಸಿನ ಯುವಕರನ್ನು ಎನ್​ಐಎ ನವರು ಕೇಸ್ ಹಾಕಿ ಜೈಲಿಗೆ ಹಾಕಿದ್ದಾರೆ. ಮನೆಯಲ್ಲಿ ದುಡಿಯುವವರು ಇಲ್ಲದೇ ನಾವು ಜೀವನ ನಡೆಸುವುದು ಕಷ್ಟವಿದೆ. ಮಕ್ಕಳು ಜೈಲಿನಲ್ಲಿ ಇರುವಾಗ ಕೆಲವರ ತಂದೆ-ತಾಯಿಗಳು ಮರಣ ಹೊಂದಿದ್ದಾರೆ. ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಮ್ಮ ಮಕ್ಕಳನ್ನು ಜೈಲಿನಿಂದ ಬಿಡಿಸಿ ಎಂದು ಪಾಲಕರಾದ ಶಂಶಾದ ಮಿರ್ಜಿ, ವಾಸಿಂ ದಸ್ತಿಯಾಲೆ, ಮುಕ್ತಿಯಾರ ಶೇಖ, ಇತರರು ಮುಖ್ಯಮಂತ್ರಿಗೆ ಮನವಿ ಮಾಡಿದರು.

2022ರ ಏಪ್ರಿಲ್ 16ರಂದು ನಡೆದ ಹಳೇ ಹುಬ್ಬಳ್ಳಿ ಗಲಭೆ ಘಟನೆಯಲ್ಲಿ ಪೊಲೀಸ್​ರು 158 ಜನರನ್ನು ಬಂಧಿಸಿದ್ದಾರೆ. ಅವರಲ್ಲಿ 7-8 ಜನ ಬಂಧಿತರ ಪಾಲಕರು ಸಿಎಂ ಅವರನ್ನು ಇಂದು ಭೇಟಿ ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net