

ಮಡಿಕೇರಿ:
ಹಿನ್ನೀರು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ನೀರಿನ ಹರಿವು ಏರಿಕೆ ಆಗಿರುವ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಣೆಕಟ್ಟೆಯಿಂದ ನದಿಗೆ ಭಾನುವಾರ ಮಧ್ಯಾಹ್ನ ನದಿಗೆ ನೀರು ಬಿಡಲಾಯಿತು. ನಾಲ್ಕು ಕ್ರಸ್ಟ್ಗೇಟ್‌ಗಳ ಮೂಲಕ 2 ಸಾವಿರ ಕ್ಯೂಸೆಕ್ ಮತ್ತು ಹಾರಂಗಿ ಜಲವಿದ್ಯುತ್ ಕೇಂದ್ರದ ಮೂಲಕ 2 ಸಾವಿರ ಕ್ಯೂಸೆಕ್ ಸೇರಿದಂತೆ ಒಟ್ಟು 4 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ.
ಭಾನುವಾರ ಮಧ್ಯಾಹ್ನದ ಮಾಹಿತಿ ಪ್ರಕಾರ 2859 ಅಡಿ ಎತ್ತರದ ಅಣೆಕಟ್ಟೆಯಲ್ಲಿ 2854.51 ಅಡಿಗಳಷ್ಟು ನೀರಿದೆ. 6820 ಕ್ಯೂಸೆಕ್ ನೀರಿನ ಒಳಹರಿವು ಇದೆ. 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 6.230 ಟಿಎಂಸಿ ಬಳಕೆಯೋಗ್ಯ ನೀರಿದೆ.
ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದ್ದು, ಒಳಹರಿವಿನ ಪ್ರಮಾಣ ಮತ್ತಷ್ಟು ಏರುವ ಸಂಭವವಿದೆ.
ಜಲಾಶಯವು ಶೀಘ್ರವೇ ಗರಿಷ್ಟ ಮಟ್ಟ ತಲುಪುವುದರಿಂದ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತಿದೆ ಎಂದು ಹಾರಂಗಿ ಪುನರ್ವಸತಿ ವಿಭಾಗದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ.
ಹಾರಂಗಿ ಅಣೆಕಟ್ಟೆಯಿಂದ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಹರಿಸುವ ಸಾಧ್ಯತೆ ಇರುವುದರಿಂದ ಹಾರಂಗಿ ಮತ್ತು ಕಾವೇರಿ ನದಿ ಪಾತ್ರದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ, ಪಾಸ್ತಿ ಹಾಗೂ ಜನಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಕೂಡ ಅಧಿಕಾರಿಗಳು ಕೋರಿದ್ದಾರೆ