

ಮಂಗಳೂರು: ಕುಡಿಯುವ ನೀರಿನ ಸಮರ್ಪಕ ಪೂರೈಕೆ ಉದ್ದೇಶದಿಂದ ಬಿಳಿಯೂರು ಡ್ಯಾಂನಿಂದ ಎಎಂಆರ್ ಡ್ಯಾಂಗೆ ನೀರು ಹರಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ 2 ಮೀ. ನೀರನ್ನು ಎಎಂಆರ್ ಡ್ಯಾಂಗೆ ಹರಿಸಲಾಗಿದೆ.
ಭಾನುವಾರ ಎಎಂಆರ್ ನೀರಿನಮಟ್ಟ 15.20ರಷ್ಟಿದ್ದು, ಸೋಮವಾರ ತುಸು ಏರಿಕೆಯಾಗಿ ನೀರಿನ ಮಟ್ಟವು 15.28 ಮೀ.ದಾಖಲಾಗಿದೆ. ಮಂಗಳವಾರ ಡ್ಯಾಂ ಮಟ್ಟ 16.2ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ಭಾನುವಾರ ನೀರಿನ ಸಂಗ್ರಹ 3.75 ಮೀಟರ್‌ಗೆ ದಾಖಲೆಯ ಇಳಿಕೆಯಾಗಿದ್ದು, ಸೋಮವಾರ ಮತ್ತೆ ಇಳಿಕೆಯಾಗಿ 3.68ಮೀಗೆ ತಲುಪಿದೆ. ಈ ಮಧ್ಯೆ ತುಂಬೆ ಡ್ಯಾಂಗೆ ಹರೇಕಳ ಡ್ಯಾಂನಿಂದ ನೀರು ಪಂಪಿಂಗ್ ಮಾಡುವ ಪ್ರಕ್ರಿಯೆ ನಿರಂತರವಾಗಿ ಮುಂದುವರಿದಿದೆ.
*ಮುಂದುವರಿದ ರೇಷನಿಂಗ್ ನೀರಿನ ಪೂರೈಕೆ
ರೇಶನಿಂಗ್ ಆರಂಭವಾದ ಬಳಿಕ ನಗರದಲ್ಲಿ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಗ್ರಾಮೀಣ ಭಾಗದಲ್ಲೂ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಸೋಮವಾಋ ಬೆಂದೂರು ಸ್ಥಾವರ ವ್ಯಾಪ್ತಿಯ ಕೋರ್ಟ್ ವಾರ್ಡ್, ಕಾರ್‌ಸ್ಟ್ರೀಟ್, ಬಾವುಟಗುಡ್ಡೆ, ಆಕಾಶವಾಣಿ, ಪದವು, ಗೋರಿಗುಡ್ಡೆ, ಸೂಟರ್‌ಪೇಟೆ, ಶಿವಭಾಗ್, ಬೆಂದೂರು, ಕದ್ರಿ, ವಾಸ್ ಲೇನ್, ಕುದ್ರೋಳಿ, ಮೀನುಗಾರಿಕಾ ಬಂದರು, ಕೊಡಿಯಾಲ್‌ಬೈಲ್. ಪಡೀಲ್ ಸ್ಥಾವರ ವ್ಯಾಪ್ತಿಯ ಮಂಗಳಾದೇವಿ, ಅತ್ತಾವರ, ಬಾಬುಗುಡ್ಡೆ, ವೆಲೆನ್ಸಿಯ, ಜಪ್ಪಿನಮೊಗರು, ಬಿಕರ್ನಕಟ್ಟೆ, ಉಲ್ಲಾಸ್ ನಗರ, ಬಜಾಲ್, ತಿರುವೈಲು, ವಾಮಂಜೂರು. ಶಕ್ತಿನಗರ ಟ್ಯಾಂಕ್: ಕುಂಜತ್ತಬೈಲ್, ಮುಗುರೋಡಿ, ಶಕ್ತಿ ನಗರ, ಸಂಜಯ ನಗರ, ಪ್ರೀತಿ ನಗರ, ಮಂಜಡ್ಕ, ರಾಜೀವನಗರ, ಬೊಂದೆಲ್, ಗಾಂಧಿನಗರ, ಶಾಂತಿನಗರ, ಕಾವೂರು. ತುಂಬೆ ಪಣಂಬೂರು ನೇರ ಮಾರ್ಗ ವ್ಯಾಪ್ತಿಯ ಕಂಕನಾಡಿ, ನಾಗುರಿ, ಪಂಪ್‌ವೆಲ್, ಬಲ್ಲೂರುಗುಡ್ಡೆ, ಪಡೀಲ್‌ಗೆ ನೀರು ಪೂರೈಕೆಯಾಗಿದೆ.
-------------------
ಜಿಲ್ಲೆಯ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸುವ ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಬಿಳಿಯೂರು ಅಣೆಕಟ್ಟಿನಲ್ಲಿ ಲಭ್ಯವಿರುವ ನೀರನ್ನು ಎ.ಎಂ.ಆರ್. ಕಿಂಡಿ ಅಣೆಕಟ್ಟಿಗೆ ಬಿಡುಗಡೆ ಮಾಡಲಾಗಿರುತ್ತದೆ
ಮುಲ್ಲೈ ಮುಗಿಲನ್, ದ.ಕ ಜಿಲ್ಲಾಧಿಕಾರಿ
-----------------------