ವೀರ ಸೌದಾಮಿನಿ ಕೃತಿ ಬಿಡುಗಡೆ

1 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೊಳ್ಳುವುದಕ್ಕೆ ಬುನಾದಿಯಾಗಿರುವ ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡ ನಾಡು ನುಡಿ ಕಟ್ಟುವಲ್ಲಿ ನಿರಂತರ ಶ್ರಮಿಸುತ್ತಿದೆ ಎಂದು ಹಿರಿಯ ಚಿಂತಕ ರಾ. ನಂ. ಚಂದ್ರಶೇಖರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ. ಸಂತೋಷ ಹಾನಗಲ್ಲ ಅವರ ವೀರ ಸೌದಾಮಿನಿ ಚಿತ್ರಸಂಪುಟ ಕಿತ್ತೂರು ರಾಣಿ ಚನ್ನಮ್ಮ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪುಸ್ತಕದ ಪ್ರಕಟಣೆ ಕಷ್ಟದಾಯಕವಾಗಿರುವ ಈ ಕಾಲದಲ್ಲಿ ಕನ್ನಡದ ರಾಣಿಯನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಈ ಕೃತಿ ಪ್ರಕಟಿಸಿದ ಕಿತ್ತೂರಿನ ಕಲ್ಮಠದ ಪೂಜ್ಯರಿಗೆ ಸಲ್ಲುತ್ತದೆ. ಬೆಳವಡಿ ಮಲ್ಲಮ್ಮ ಮಹಿಳಾ ಸೈನಿಕರನ್ನು ಕಟ್ಟಿಕೊಟ್ಟ ಪ್ರಥಮ ಮಹಿಳೆಯಾಗಿದ್ದಾಳೆ. ಕೆಳದಿ ಚನ್ನಮ್ಮ, ಬೆಳವಡಿ ಮಲ್ಲಮ್ಮ, ಕಿತ್ತೂರು ಚನ್ನಮ್ಮ ಇವತ್ತಿನ ಪ್ರಚಾರದ ಯುಗದಲ್ಲಿ ಹಿಂದುಳಿದಿರುವುದು ಖೇದದ ಸಂಗತಿ. ಸಂಗೊಳ್ಳಿ ರಾಯಣ್ಣನಿಗೆ ಸ್ಫೂರ್ತಿ ನೀಡಿದ ಚನ್ನಮ್ಮಳ ಕಾರ್ಯತತ್ಪರತೆ ಅಪಾರವಾದದ್ದು ಎಂದರು.
ಸಾನ್ನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಇದು ಆಕರಗ್ರಂಥವಾಗಿ ಬರಬೇಕೆಂದು ನಮ್ಮ ಆಶಯವಾಗಿತ್ತು. ಆ ನಿಟ್ಟಿನಲ್ಲಿ ಕೃತಿ ಹೊರಬಂದಿದೆ. ಇತ್ತೀಚೆಗೆ ಸಂಶೋಧಕರ ಕೊರತೆ ಕಾಣುತ್ತೇವೆ. ರಾಣಿಚೆನ್ನಮ್ಮ ಕಟ್ಟಿದ ಅರಮನೆ ಹಾಳಾಗಿರಬಹುದು. ಆದರೆ ಗುರು ಮನೆ ಜೀವಂತವಾಗಿದೆ. ಈ ಗುರುಮನೆ ಚನ್ನಮ್ಮಳ ಇತಿಹಾಸ ಜೀವಂತವಾಗಿ ಉಳಿಸುವಲ್ಲಿ ಶ್ರಮಿಸುತ್ತಿದೆ ಎಂದರು.
ಪ್ರಾಧ್ಯಾಪಕ ಡಾ. ಬಸವರಾಜ ಅಕ್ಕಿ, ಲೇಖಕ ಡಾ. ಸಂತೋಷ ಹಾನಗಲ್ಲ ಮಾತನಾಡಿದರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಡಾ. ಸುಜಾತಾ ಕೊಂಬಳಿ, ಡಾ. ಅಶೋಕ ಶೆಟ್ಟರ್, ಡಾ. ಅರವಿಂದ ಯಾಳಗಿ, ಡಾ. ಸಂಜೀವ ಹಾನಗಲ್ಲ, ಸರೋಜಾ ಹಾನಗಲ್ಲ, ಸುಖದೇವ ಪಾನಬುಡೆ, ಹನುಮಂತ ಮೇಲಿನಮನಿ, ಸರಸ್ವತಿ ಭಗವತಿ, ಸಿದ್ಧರಾಮ ಹಿಪ್ಪರಗಿ, ಲಕ್ಷ್ಮಣ ಬಕ್ಕಾಯಿ, ಮಹಾಂತೇಶ ನರೇಗಲ್, ಚಂದ್ರೇಶೇಖರ ರೊಟ್ಟಿಗವಾಡ, ಇತರರು ಇದ್ದರು.
ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net