

ಜಮಖಂಡಿ: ನಗರದ ಡಾ. ಗುರುದೇವ ರಾನಡೆ ಸಾಂಸ್ಕೃತಿಕ ಭವನದಲ್ಲಿ ಏ. 6ರಂದು ಬೆಳಗ್ಗೆ 10 ಗಂಟೆಗೆ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಸಂಗಮೇಶ ಮಟೋಳಿ ಅವರ ‘ಜಮಖಂಡಿ ತಾಲೂಕಿನ ಅಪರೂಪದವರು’ 8ನೇ ಕೃತಿ ಬಿಡುಗಡೆ ಹಾಗೂ ಸಾಧಕರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಸಂತೋಷ ತಳಕೇರಿ ತಿಳಿಸಿದರು.
ನಗರದ ಕಾನಿಪ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನ ನಮನ ಟ್ರಸ್ಟ್, ಸಾಹಿತ್ಯ ಸೌರಭ ವೇದಿಕೆ, ವೀರೇಶ್ವರ ಪ್ರಕಾಶನದ ಸಹಯೋಗದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಉದ್ಘಾಟಿಸುವರು. ಬೆಂಗಳೂರು ಮಾಹಿತಿ ಹಕ್ಕುಗಳ ಆಯೋಗದ ಆಯುಕ್ತ ರಾಜಶೇಖರ ಎಸ್. ಕೃತಿ ಬಿಡುಗಡೆ ಮಾಡುವರು ಎಂದು ಮಾಹಿತಿ ನೀಡಿದರು.
ಮಾಜಿ ಶಾಸಕ ಆನಂದ ನ್ಯಾಮಗೌಡ, ಬೆಂಗಳೂರು ಜಿಲ್ಲಾ ನೋಂದಣಾಧಿಕಾರಿ ಸವಿತಾ ಬೆಳಗಲಿ, ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರ ಮುಕುಂದ ಬೆಳಗಲಿ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಪಾಲ್ಗೊಳ್ಳುವರು ಎಂದರು.
ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ ಮಾತನಾಡಿ, ನಗರದ ದೇಸಾಯಿ ಸರ್ಕಲ್‌ನಿಂದ ಅಶೋಕ ಸರ್ಕಲ್ ಮಾರ್ಗವಾಗಿ ರಾನಡೆ ಭವನದವರೆಗೆ ಅಪರೂಪದವರು ಕೃತಿಗಳ ಮೆರವಣಿಗೆ ನಡೆಸಲಾಗುವುದು ಎಂದರು.
ಸಾಹಿತಿ ಡಾ. ಸಂಗಮೇಶ ಮಟೋಳಿ ಮಾತನಾಡಿದರು. ವಿನೋದ ಲೋಣಿ ಇದ್ದರು.