

ಮೈಸೂರು: ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀಧರ ಹೆಗ್ಗೋಡು ರಚನೆಯ ‘ಪಾತ್ರ ಪ್ರವೇಶ’ ಕೃತಿ ಲೋಕಾರ್ಪಣೆಗೊಂಡಿತು.
ನಟ ಪ್ರಕಾಶ್ ರೈ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಶ್ರೀಧರ ಹೆಗ್ಗೋಡು ಅವರು ಅಪಘಾತದಿಂದ ತಮ್ಮ ದೇಹದ ಸ್ವಾಧೀನ ಕಳೆದು ಕೊಂಡರು. ದುರ್ಘಟನೆಯ ನಂತರ ಸೋಲುವುದು ಅಥವಾ ಹತಾಶೆಗೆ ಒಳಗಾಗುವುದು ಸಹಜ. ಆದರೆ, ಶ್ರೀಧರ ಹೆಗ್ಗೋಡು ಅವರು ಇಂತಹ ಪರಿಸ್ಥಿತಿಯಲ್ಲೂ ಕೃತಿ ರಚಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಟ ಅಚ್ಯುತ್ ಕುಮಾರ್ ಮಾತನಾಡಿ, ಶ್ರೀಧರ ಹೆಗ್ಗೋಡು ರಂಗಭೂಮಿಯಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದ ಯುವಕ. ಆದರೆ, ಅಪಘಾತದಿಂದ ಅವರು ದೇಹದ ಸ್ವಾಧೀನ ಕಳೆದುಕೊಂಡರು. ಅಪಘಾತವಾದರೂ ಅವರಲ್ಲಿನ ಜೀವನೋತ್ಸವ ಕಡಿಮೆಯಾಗಲಿಲ್ಲ. ಕೈ ಸ್ವಾಧೀನವಿಲ್ಲದೆ ಇದ್ದರೂ ಅವರು ಮತ್ತೊಬ್ಬರ ಸಹಕಾರ ಪಡೆದು ಕೃತಿಯನ್ನು ರಚಿಸಿರುವುದು ಹೆಗ್ಗಳಿಕೆಯ ವಿಚಾರ ಎಂದರು.
ವೇದಿಕೆಯಲ್ಲಿ ನಟ ಸತೀಶ್ ನೀನಾಸಂ, ರಂಗ ನಿರ್ದೇಶಕರಾದ ಎಚ್.ಎಸ್. ಉಮೇಶ್, ಬಿ.ಆರ್. ವೆಂಕಟರಮಣ ಐತಾಳ್, ಕೃತಿಯ ಕರ್ತೃ ಶ್ರೀಧರ ಹೆಗ್ಗೋಡು ಇದ್ದರು.