ದಂಧೆಕೋರರ ವಿರುದ್ಧ ಕಠಿಣ ಕ್ರಮ: ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಎಚ್ಚರಿಕೆ

Release of the campaign poster Mandya
Published on

ಮಂಡ್ಯ: ಜಿಲ್ಲೆಯ ಎಲ್ಲ ಜನಪರ ಸಂಘಟನೆಗಳು ಒಗ್ಗಟ್ಟಿನಿಂದ ಮಾಡುತ್ತಿರುವ ಬೆಟ್ಟಿಂಗ್ ವಿರುದ್ಧದ ಈ ಪೋಸ್ಟರ್ ಅಭಿಯಾನದ ಉದ್ಧೇಶ ಸಮಾಜಕ್ಕೆ ಪೂರಕವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಅಭಿಯಾನದ ಫೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಲಾಖೆಯಿಂದ ತೆರೆದಿರುವ ಸಹಾಯವಾಣಿಗೆ ಬರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಮಾತ್ರವಲ್ಲದೆ ದಂಧೆ ಮಾಡುವವರ ಮೇಲೆ ಪೊಲೀಸ್ ಇಲಾಖೆ ಕ್ರಮ ಜರುಗಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಜನಶಕ್ತಿ ಸಂಘಟನೆ ರಾಜ್ಯ ಕಾರ್ಯದರ್ಶಿ ಜಿ.ಪೂರ್ಣಿಮಾ ಮಾತನಾಡಿ, ಕ್ರಿಕೆಟ್ ಬೆಟ್ಟಿಂಗ್ ನಿಯಂತ್ರಿಸಲು ಪೊಲೀಸ್ ಇಲಾಖೆ ಸಹಾಯವಾಣಿ ಆರಂಭಿಸಿದೆ. ಯುವಜನರನ್ನು ದಿಕ್ಕುತಪ್ಪಿಸುತ್ತಿರುವ ಶಕ್ತಿಗಳನ್ನು ಮಟ್ಟಹಾಕುವ ಸಲುವಾಗಿ ಈಗ ಫೋಸ್ಟರ್ ಅಭಿಯಾನ ಆರಂಭಿಸುತ್ತಿದ್ದೇವೆ. ಎಲ್ಲ ಸಮಾನ ಮನಸ್ಕ ಗೆಳೆಯರು ಜತೆಯಾಗಿ ಬೆಟ್ಟಿಂಗ್ ಮುಕ್ತ ಮಂಡ್ಯ ನಿರ್ಮಾಣಕ್ಕೆ ಕೈ ಜೋಡಿಸಿ ಎಂದು ಮನವಿ ಮಾಡಿದರು.

ವಕೀಲ ಬಿ.ಟಿ.ವಿಶ್ವನಾಥ್ ಮಾತನಾಡಿ, ಜಿಲ್ಲೆಯಾದ್ಯಂತ ಜನಜಾಗೃತಿ ಮೂಡಿಸಲು ಮೂರು ಸಾವಿರ ಫೋಸ್ಟರ್ ಮತ್ತು ಏಳು ಸಾವಿರ ಕರಪತ್ರಗಳನ್ನು ಹಂಚುತ್ತಿದ್ದೇವೆ. ಸಮಾಜದ ಹಿತ ಬಯಸುವವರು ಈ ಫೋಸ್ಟರ್ ಪ್ರಿಂಟ್ ತೆಗೆದುಕೊಂಡು ನಿಮ್ಮ ಹೆಸರು, ಸಂಘ ಸಂಸ್ಥೆಯ ಹೆಸರಿನಲ್ಲಿ ಮುದ್ರಿಸಿ ಶಾಲಾ ಕಾಲೇಜುಗಳಲ್ಲಿ ಮತ್ತು ನಿಮ್ಮ ಗ್ರಾಮದಲ್ಲಿ ಮುಕ್ತವಾಗಿ ಹಂಚಬಹುದು ಎಂದು ಹೇಳಿದರು.

ಕರುನಾಡ ಸೇವಕರು ಸಂಘಟನೆಯ ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಕಚೇರಿ, ಪೊಲೀಸ್ ಠಾಣೆ ಮತ್ತು ಸಾರ್ವಜನಿಕ ಆಸ್ಪತ್ರೆ ಜತೆಗೆ ಯುವಜನರು ಹೆಚ್ಚಾಗಿ ಒಂದೆಡೆ ಸೇರುವ ಶಾಲಾ ಕಾಲೇಜು, ಕ್ರೀಡಾಂಗಣ, ಬಸ್ ನಿಲ್ದಾಣ, ಟೀ ಶಾಪ್‌ಗಳಲ್ಲಿ ಈ ಫೋಸ್ಟರ್ ಅಂಟಿಸಲಾಗುವುದು. ಈ ರೀತಿ ಜಾಗೃತಿ ಮೂಡಿಸುವುದರಿಂದ ಬದಲಾವಣೆ ಸಾಧ್ಯವಿದೆ. ನಮ್ಮೊಂದಿಗೆ ಎಲ್ಲರೂ ಕೈ ಜೋಡಿಸಿ ಎಂದು ಮನವಿ ಮಾಡಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಶಿವಳ್ಳಿ ಚಂದ್ರು ಮಾತನಾಡಿ, ರೈತರ ಮಕ್ಕಳ ಆತ್ಮಹತ್ಯೆಗಳು ಬಹುತೇಕ ಬೆಟ್ಟಿಂಗ್, ಇಸ್ಪೀಟ್ ದಂಧೆಯಿಂದ ನಡೆಯುತ್ತಿದೆ. ಪೊಲೀಸ್ ಇಲಾಖೆ ಆರಂಭಿಸಿರುವ ಸಹಾಯವಾಣಿಗೆ ದೂರು ನೀಡುವ ಕೆಲಸವನ್ನು ರೈತಸಂಘವೂ ಮಾಡಲಿದೆ. ಕ್ರಮ ಜರುಗಿಸುವ ಹೊಣೆಗಾರಿಕೆ ಪೊಲೀಸರ ಮೇಲಿದೆ ಎಂದರು.

ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಸ್ವಂತ ಮನೆ ನಮ್ಮ ಹಕ್ಕು ಸಂಘಟನೆ ಸಂಚಾಲಕ ಬಿ.ಕೆ.ಸತೀಶ್, ಕರುನಾಡು ಸೇವಕರು ಸಂಘಟನೆಯ ಬಿ.ಎಂ.ಮನು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net