

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಕ್ಟೋಬರ್ ತಿಂಗಳಿಗೆ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿದಾರರಿಗೆ ಪಡಿತರ ಆಹಾರ ಧಾನ್ಯವನ್ನು ಬಿಡುಗಡೆ ಮಾಡಿದೆ.
ಅಕ್ಟೋಬರ್ನಲ್ಲಿ ಪಡಿತರ ವಿತರಣೆಯಲ್ಲಿ ಅಂತ್ಯೋದಯ (ಎಎವೈ) ಚೀಟಿದಾರರಿಗೆ ಪ್ರತಿ ಚೀಟಿಗೆ ಅಕ್ಕಿ 21 ಕೆಜಿ, ಜೋಳ 14 ಕೆಜಿ ವಿತರಿಸಲಾಗುತ್ತದೆ. ಪಿಎಚ್ಎಚ್ (ಬಿಪಿಎಲ್)ನ ಪ್ರತಿ ಸದಸ್ಯರಿಗೆ ಅಕ್ಕಿ 3 ಕೆಜಿ, ಜೋಳ 2 ಕೆಜಿ ಉಚಿತವಾಗಿ ವಿತರಿಸಲಾಗುತ್ತದೆ. ಅಂತರ್ ರಾಜ್ಯ ಪೋರ್ಟೆಬಿಲಿಟಿ ಮೂಲಕ ಪಡಿತರ ಪಡೆಯುವವರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ನೀಡಲಾಗುತ್ತದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪಡಿತರ ಚೀಟಿದಾರರು ತಮ್ಮ ಜಾತಿ ಪ್ರಮಾಣ ಪತ್ರದೊಂದಿಗೆ (ಆರ್ಡಿ ಸಂಖ್ಯೆ ಹೊಂದಿರುವ) ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ. ಜಿಲ್ಲೆಯಲ್ಲಿ 29,430 ಅಂತ್ಯೋದಯ ಹಾಗೂ 3,55,200 ಬಿಪಿಎಲ್ ಸೇರಿ ಒಟ್ಟು 3,84,630 ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ.
ಅಕ್ಟೋಬರ್ 1ರಿಂದ ಅತ್ಯಂತದವರೆಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ, ಸಂಜೆ 4ರಿಂದ ರಾತ್ರಿ 9ರವರೆಗೆ (ಮಂಗಳವಾರ ರಜಾ ಹೊರತುಪಡಿಸಿ) ಚೀಟಿಯಲ್ಲಿನ ಸದಸ್ಯರು ಇ-ಕೆವೈಸಿ ಮಾಡುವ ಹಾಗೂ ಪಡಿತರ ವಿತರಣೆ ಕಾರ್ಯ ಜರುಗಲಿದ್ದು, ಚೀಟಿದಾರರು ಬಯೋ ನೀಡಿದ ತಕ್ಷಣ ಪಡಿತರ ಪಡೆಯಲು ತಿಳಿಸಿದೆ.
ಇ-ಕೆವೈಸಿಗೆ ಶುಲ್ಕ ನೀಡುವಂತಿಲ್ಲ. ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಪಡಿತರ ಚೀಟಿ ರದ್ದತಿಗೆ ಕ್ರಮ ವಹಿಸಲಾಗುವುದು. ಪಡಿತರ ವಿತರಣೆ ಕುರಿತು ದೂರುಗಳಿದ್ದರೆ, ಸಂಬಂಧಿಸಿದ ತಹಸೀಲ್ದಾರ ಕಚೇರಿ, ಆಹಾರ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.