

ಸಾಗರ: ಯಾವುದೇ ವ್ಯಕ್ತಿ ಸ್ವಾರ್ಥವಿಲ್ಲದೇ ಸಾತ್ವಿಕ ಗುಣದಿಂದ ಸಮಾಜದಲ್ಲಿ ತೊಡಗಿಕೊಂಡರೆ ಆತ ಎಂದಿಗೂ ಯಶಸ್ಸು ಕಾಣುತ್ತಾನೆ ಎಂದು ವರದಹಳ್ಳಿ ಶ್ರೀಧರ ಸೇವಾ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಕೆ.ವಿ.ಶ್ರೀಧರ ರಾವ್ ಕಾನ್ಲೆ ಹೇಳಿದರು.
ತಾಲೂಕಿನ ಉಳ್ಳೂರು ಗ್ರಾಪಂ ವ್ಯಾಪ್ತಿಯ ಬ್ರಾಹ್ಮಣ ಮಂಚಾಲೆ ಗ್ರಾಮದ ಎಂಟಿಪಿ ಗೃಹದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಂ.ಟಿ.ಪರಮೇಶ್ವರ ಸಂಸ್ಮರಣ ಗ್ರಂಥ ‘ಪರಮೇಶ್ವರ ಪ್ರೀಯತಾಂ’ ಲೋಕಾರ್ಪಣೆ ಮಾಡಿ ಮಾತನಾಡಿ, ಎಂ.ಟಿ.ಪರಮೇಶ್ವರ ಅವರನ್ನು ಶ್ರೀಧರ ಮಹಾಮಂಡಲದ ಅಧ್ಯಕ್ಷರನ್ನಾಗಿಸುವುದು ಸಂಸ್ಥೆಯ ಪ್ರಪ್ರಥಮ ಅಧ್ಯಕ್ಷ ಕಾನ್ಲೆ ಶಂಕರನಾರಾಯಣ ರಾವ್ ಅವರ ಪರಮ ಇಚ್ಛೆಯಾಗಿತ್ತು. ಅದೇ ರೀತಿ ಅಧ್ಯಕ್ಷತೆಯನ್ನು ಅವರು ವಹಿಸಿದ ಸಂದರ್ಭದಲ್ಲಿ ಎದುರಾದ ಎರಡು ಸಂಕ್ರಮಣ ಕಾಲದಲ್ಲಿ ಎಂಟಿಪಿ ತಮ್ಮ ತಾಳ್ಮೆಯ ಮೂಲಕವೇ ಪರಿಸ್ಥಿತಿಯನ್ನು ನಿರ್ವಹಿಸಿದರು ಎಂದು ನೆನಪಿಸಿಕೊಂಡರು.
ತಮ್ಮ ಸಾತ್ವಿಕ ಗುಣಗಳಿಂದ ಧಾರ್ಮಿಕ, ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಎಂ.ಟಿ.ಪರಮೇಶ್ವರ್ ಆ ರೀತಿ ಇದ್ದ ಕಾರಣದಿಂದಲೇ ಅವರು ನಮ್ಮೊಂದಿಗಿದ್ದರೆ ಘನತೆ ಎಂಬುದನ್ನು ಮನಗಂಡು ಹಲವಾರು ಸಂಸ್ಥೆಗಳ ಆಡಳಿತ ಮಂಡಳಿಗಳು ಅವರಿಗೆ ಸ್ಥಾನ ನೀಡಿದ್ದವು. ಅವರು ಸಾರ್ವಜನಿಕವಾಗಿ ಇದ್ದಂತೆಯೇ ಮನೆಯೊಳಗೂ ಇದ್ದದ್ದರಿಂದಲೇ ಅವರು ಅವಿಭಕ್ತ ಕುಟುಂಬವೊಂದರ ಆಧಾರ ಸ್ತಂಭವಾಗಿ ಗುರುತಿಸಿಕೊಂಡರು. ಮೃದು ಮಾತು, ಪಕ್ಷಪಾತವಿಲ್ಲದ ವರ್ತನೆ, ವಿಶಾಲ ಹೃದಯ, ಎಲ್ಲರನ್ನೂ ಹೊಂದಾಣಿಕೆಯೊಂದಿಗೆ ನಿರ್ವಹಿಸುವ ಸ್ವಭಾವ ಮತ್ತು ಅವರ ಸದ್ವರ್ತನೆ ಮನೆ ಮಂದಿಯನ್ನು ಪ್ರಭಾವಿಸಿ ಅದನ್ನು ಅನುಸರಿಸುವಂತೆ ಮಾಡಿದೆ ಎಂಬುದೇ ಎಂಟಿಪಿ ಅವರ ದೊಡ್ಡ ಯಶಸ್ಸು ಎಂದರು.
ಪುಸ್ತಕದ ಕುರಿತು ಮಾತನಾಡಿದ ಸಂಸ್ಕೃತ ಅಧ್ಯಾಪಕ ವಿದ್ವಾನ್ ಗಜಾನನ ಭಟ್ಟ ರೇವಣಕಟ್ಟಾ, ಮುಗ್ಧ ಸ್ವಭಾವವೂ ಸೇರಿ ಮನೆಯ ಹೊರಗೆ ದಾನ-ಧರ್ಮಗಳಲ್ಲಿ ಹೆಸರುವಾಸಿಯಾಗಿದ್ದ ಕುಟುಂಬವಾಗಿದ್ದರಿಂದಲೇ ಎಂಟಿಪಿ ಕುಟುಂಬಕ್ಕೆ ಬೋಳೈನ ಮನೆತನ ಎಂಬ ಹೆಸರು ಬಂದಿರಬೇಕು. ದೇವರಿಗೆ ಪ್ರಿಯನಾದವನು ಎಂಬ ಅರ್ಥದ ಪರಮೇಶ್ವರ ಪ್ರೀಯತಾಂ ಎಂಬ ಮಂತ್ರೋಕ್ತಿಯನ್ನು ಎಂಟಿಪಿಯವರಿಗೆ ಅನ್ವಯಿಸಿ ಪುಸ್ತಕದ ಶೀರ್ಷಿಕೆ ಇರಿಸಿರುವುದು ಹೆಚ್ಚು ಅರ್ಥಪೂರ್ಣ ಎಂದು ಹೇಳಿದರು.
ಎಂ.ಟಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕದ ಸಂಪಾದಕ ತಿರುಮಲ ಮಾವಿನಕುಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಧರ ಮಹಾಮಂಡಲದ ಅಧ್ಯಕ್ಷ ಎಂ.ಜಿ.ಕೃಷ್ಣಮೂರ್ತಿ, ಸುಭದ್ರಾ, ಸುಮಾ, ರೇಖಾ, ಅಭಿಷೇಕ್, ತೇಜಸ್ವಿ ತಿಮ್ಮಪ್ಪ, ಬಿ.ಜಿ.ಮಂಜಪ್ಪ ಇದ್ದರು. ತಿರುಮಲ ಶರ್ಮ ಭೀಮನಕೋಣೆ ವೇದಘೋಷ ಮಾಡಿದರು.