

ಮೈಸೂರು: ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಭಾನುವಾರ ದೊಡ್ಡಟ್ಟಿ ಪ್ರಕಾಶನ ಸಂಸ್ಥೆ ಹೊರ ತಂದಿರುವ ಬಸವರಾಜ ದೊಡ್ಡಟ್ಟಿ ರಚನೆಯ ಶ್ರೀ ಗುರುಮಲ್ಲೇಶ್ವರ ಜೀವನ ಸಾಧನೆಯ ‘ಮಹಾದಾಸೋಹಿ’ ಕೃತಿ ಬಿಡುಗಡೆ ಸಮಾರಂಭ ನಡೆಯಿತು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ಡಾ.ಗೊ.ರು. ಚನ್ನಬಸಪ್ಪ ಮಾತನಾಡಿ, ಒಂದು ಭಿಕ್ಷಾ ಜೋಳಿಗೆ ಹಿಡಿದು ಲೋಕದ ರಕ್ಷಣೆಗೆ ನಿಂತ ಮಹಾಸಂತ ಗುರುಮಲ್ಲೇಶ್ವರರು. ಅವರು ಅಂತಹ ಶ್ರೇಷ್ಠ ವ್ಯಕ್ತಿ. ಇಂದಿನ ತಲೆಮಾರಿನವರಿಗೆ ಗುರುಮಲ್ಲೇಶ್ವರರನ್ನು ಪರಿಚಯಿಸುವ ಸಲುವಾಗಿ ಬಸವರಾಜ ದೊಡ್ಡಟ್ಟಿ ಅವರು ಕೃತಿಯನ್ನು ರಚಿಸಿದ್ದಾರೆ. ಗುರುಮಲ್ಲೇಶ್ವರರ ಜೀವನದ ಅನೇಕ ಸಂಗತಿಗಳನ್ನು ಕೃತಿಯಲ್ಲಿ ದಾಖಲಿಸಲಾಗಿದೆ. ಅವರ ಬಾಲ್ಯದಿಂದ ಐಕ್ಯರಾಗುವವರೆಗಿನ ಮಾಹಿತಿ ಇದೆ ಎಂದು ಹೇಳಿದರು.
ಗುರುಮಲ್ಲೇಶ್ವರರ ಕಾಲದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಬದುಕಿನ ಚಿತ್ರವನ್ನು ಕೃತಿಯಲ್ಲಿ ತೆರೆದಿಟ್ಟಿದ್ದಾರೆ. ಒಟ್ಟು 10 ಅಧ್ಯಯಗಳಲ್ಲಿ ಲೇಖಕರು ಗುರುಮಲ್ಲೇಶ್ವರ ಪರಿಚಯವನ್ನು ನಮಗೆ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಗುಂಡ್ಲುಪೇಟೆ ಸೋಮಳ್ಳಿಯ ಶ್ರೀ ವೀರಸಿಂಹಾಸನ ಸಿಲಾಮಠದ ಸಿದ್ದಮಲ್ಲ ಸ್ವಾಮೀಜಿ, ಶ್ರೀ ನಟರಾಜ ಶಿಕ್ಷಣ ಸಂಸ್ಥೆಯ ವಿಶೇಷಾಧಿಕಾರಿ ಡಾ.ಎಸ್. ಶಿವರಾಜಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಲೆಯೂರು ಗುರುಸ್ವಾಮಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್ ಹಾಗೂ ಇತರರು ಇದ್ದರು.