ಕೇಂದ್ರದಿಂದ ಹೆಸರು ಬೆಳೆವಿಮೆ ಪರಿಹಾರ ಬಿಡುಗಡೆ

cc patil
Published on

ನರಗುಂದ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹಾಳಾದ ಹೆಸರು ಉತ್ಪನ್ನದ ಬೆಳೆವಿಮೆ ಪರಿಹಾರ ಹಣ ಕೇಂದ್ರ ಸರ್ಕಾರದಿಂದ ಈಗಾಗಲೇ ಬಿಡುಗಡೆ ಮಾಡಿದೆ. ತಾಲೂಕಿನ ರೈತರು ಬೆಳೆವಿಮೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಸಬ್ಸಿಡಿ ಬೀಜ, ರಸಗೊಬ್ಬರ ವಿತರಣೆಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ‘ಮುಂಗಾರು ಹಂಗಾಮಿನಲ್ಲಿ ಸರಿಯಾಗಿ ಮಳೆ ಸುರಿಯದೆ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಪ್ರತಿ ಹೆಕ್ಟೇರ್‌ಗೆ 8,200 ರೂ. ಬೆಳೆವಿಮೆ ಪರಿಹಾರ ಬಿಡುಗಡೆಗೊಂಡಿದ್ದು, ಅರ್ಹರು ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು. ಹಿಂಗಾರು ಹಂಗಾಮಿನಲ್ಲಿ ಕಡಲೆ ಬಿತ್ತನೆ ಬೀಜ ಹಾಗೂ ತಾಡಪತ್ರಿ, ಕ್ರಿಮಿನಾಶಕ ಔಷಧ, ಶೇಂಗಾ ಬೀಜದ ಕಿಟ್‌ಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸಾವಿತ್ರಿ ಶಿವನಗೌಡ್ರ ಮಾತನಾಡಿ, ರೈತರು ಸಿರಿಧ್ಯಾನ್ಯ ಬೆಳೆಯಲು ಮುಂದಾಗಬೇಕು. ಹಿಂಗಾರು ಹಂಗಾಮಿನ ಸಬ್ಸಿಡಿ ಬಿತ್ತನೆ ಬೀಜ ಪಡೆಯಲು ತಪ್ಪದೇ ಆಧಾರ್ ಕಾರ್ಡ್ ತರಬೇಕು. ನರಗುಂದದ ಟಿಎಪಿಸಿಎಂಎಸ್ ಹಾಗೂ ತಾಲೂಕಿನ ವಿವಿಧ 5 ಗ್ರಾಪಂ ವ್ಯಾಪ್ತಿಯ ವ್ಯವಸಾಯ ಸೇವಾ ಸಹಕಾರಿ ಸಂಘಗಳಲ್ಲಿ ಬಿತ್ತನೆ ಬೀಜಗಳ ವಿತರಣೆ ಮಾಡಲಾಗುತ್ತದೆ ಎಂದರು.

ಕೃಷಿ ಅಧಿಕಾರಿ ನವೀನಕುಮಾರ ಪಾಟೀಲ, ಮಹೇಶ ಮಹಾಲಿನಮನಿ, ಹನುಮಂತ ಹವಾಲ್ದಾರ, ವಿಠ್ಠಲ ಹವಲ್ದಾರ, ಪಿ.ಕೆ. ನೇಕಾರ, ಶಿವಾಜಿ ಸಾಠೆ, ಬಸವರಾಜ ಹಾಲವರ, ಹಣಗಿ, ಶಿವಾನಂದ ಮುತವಾಡ. ಪವಾಡೆಪ್ಪ ವಡ್ಡಿಗೇರಿ, ವಸಂತ ಜೋಗಣ್ಣವರ, ಶಂಕರಗೌಡ ಯಲ್ಲಪ್ಪಗೌಡ್ರ, ಚಂದ್ರು ದಂಡಿನ, ಬಸ್ಸು ಪಾಟೀಲ, ಬಸನಗೌಡ ಅಣ್ಣಿಗೇರಿ, ಶಿವಾಜಿ ಡಾಣೆ, ಆರ್.ಬಿ. ಅಳಗವಾಡಿ, ಸಿದ್ದಪ್ಪ ಯಲಿಗಾರ, ಪ್ರಕಾಶ ಪಟ್ಟಣಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net