

ವಿಜಯವಾಣಿ ಸುದ್ದಿಜಾಲ ಧಾರವಾಡ
ಆಧ್ಯಾತ್ಮ, ತತ್ವ, ಸಿದ್ಧಾಂತಗಳು ಬದುಕಿಗೆ ಪಾಠ ಕಲಿಸಲು ಮನುಷ್ಯ ರಚಿಸಿಕೊಂಡ ವಿಧಾನಗಳು. ಕಾಯಕ, ದಾಸೋಹ, ಸಮಾನತೆ ಮತ್ತು ಸಹೋದರತ್ವ ನಿಜವಾದ ತತ್ವಶಾಸ್ತçವಾಗಿದೆ. ಧ್ಯಾನ, ಜಪ, ತಪಗಳಿಗಿಂತ ಮನುಷ್ಯತ್ವ ಇಟ್ಟುಕೊಂಡು ಅನ್ಯರಿಗೆ ತೊಂದರೆಯಾಗದ0ತೆ ಬದುಕುವುದೇ ತತ್ವಶಾಸ್ತ್ರ. ಇದೆಲ್ಲದರ ಮುಂದುವರಿದ ಭಾಗ ಪ್ರಜಾಪ್ರಭುತ್ವ ಎಂದು ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮೀಜಿ ಹೇಳಿದರು.
ನಗರದ ಸೃಜನಾ ರಂಗಮAದಿರದಲ್ಲಿ ಸಚಿವ ಸಂತೋಷ ಲಾಡ್ ಪುತ್ರ ಕರಣ್ ಲಾಡ್ ರಚಿತ `ಪ್ರತ್ಯನುಕರಣೆಯ ನ್ಯೂನತೆಗಳು' ಕನ್ನಡ ಅನುವಾದ ಕೃತಿ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶರಣರು 12ನೇ ಶತಮಾನದಲ್ಲಿ ಸಮಾನತೆಯ ಜೊತೆಗೆ ಸಾರ್ಥಕ ಬದುಕು ಬದುಕುವುದನ್ನು ವಚನಗಳ ಮೂಲಕ ವಚನಗಳಲ್ಲಿ ಕಲಿಸಿಕೊಟ್ಟಿದ್ದಾರೆ. ಲೇಖಕ ಕರಣ್ ಲಾಡ್ ವಯಸ್ಸು ಚಿಕ್ಕದಾದರೂ ವಿಚಾರದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಅದಕ್ಕೆ ಕೃತಿಯೇ ನಿದರ್ಶನ ಎಂದರು.
ಕೃತಿ ಬಿಡುಗಡೆಗೊಳಿಸಿದ ಸಾಹಿತಿ ಡಾ. ವೀರಣ್ಣ ರಾಜೂರ ಮಾತನಾಡಿ, ಲೇಖಕ ಕರಣ್ ಲಾಡ್ ಸಣ್ಣ ವಯಸ್ಸಿನಲ್ಲಿ ಸಾಹಿತ್ಯ ಮತ್ತು ತತ್ವಶಾಸ್ತçದತ್ತ ಗಮನ ಹರಿಸಿದ್ದು ಮೆಚ್ಚುವ ಸಂಗತಿ ಎಂದರು.
ಸಚಿವ ಸಂತೋಷ ಲಾಡ್ ಮಾತನಾಡಿ, ನಮ್ಮ ಕುಟುಂಬದಲ್ಲಿ ಯಾರೂ ಸಾಹಿತಿಗಳಿರಲಿಲ್ಲ. ಪುತ್ರ ಕರಣ್‌ನ ಸಾಹಿತ್ಯ ಪ್ರೀತಿಯನ್ನು ನಿರ್ಲಕ್ಷಿಸಿದ್ದೆ. ಪ್ರಜ್ಞಾವಂತರಿಗೆ ಈತನ ವಿಚಾರ ಹೇಳಿ ಬೆಂಬಲಿಸಿದೆ ಎಂದರು.
ಯುವ ಲೇಖಕ ಕರಣ್ ಲಾಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಽಕಾರಿ ದಿವ್ಯ ಪ್ರಭು, ಅನುವಾದಕ ಡಾ. ವಿನಾಯಕ ನಾಯಕ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಡಾ. ಶಶಿಧರ ತೋಡಕರ್, ಸಮೀರ ಜೋಶಿ, ಡಾ. ಎಂ.ಪಿ. ರಮೇಶ, ಡಾ. ಬಾಳಣ್ಣ ಶೀಗೀಹಳ್ಳಿ, ಇತರರಿದ್ದರು.
ಡಾ. ಲೋಹಿತ ನಾಯ್ಕರ್ ನಿರೂಪಿಸಿದರು. ಕೆಸಿಡಿ ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ ವಂದಿಸಿದರು.