ಸಾಧಕರಿಗಿಂತ ಸಮಯ ಸಾಧಕರೇ ಹೆಚ್ಚು: ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಬೇಸರ

1 (2)
Published on

ಮಂಡ್ಯ: ಸಾಧನೆ ಹಾದಿ ಸುಲಭವಲ್ಲ, ಬದಲಿಗೆ ಕಠಿಣ ಪರಿಶ್ರಮ ಬೇಕು. ಜತೆಗೆ ಬದ್ಧತೆ, ತಾಳ್ಮೆ ಇರಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಸಲಹೆ ನೀಡಿದರು.

ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಡಾ.ಎಸ್.ಶ್ರೀನಿವಾಸ್‌ಶೆಟ್ಟಿ ಅಭಿನಂದನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಶ್ರೀನಿವಾಸ ಶೆಟ್ಟಿ ದಂಪತಿಗೆ ಅಭಿನಂದನೆ ಹಾಗೂ ಅಭಿನಂದನಾ ಗ್ರಂಥ ಸಮರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಾಧನೆಯ ಫಲಿತಾಂಶ ಬೇಗ ಬರುವುದಿಲ್ಲ. ಆದರೆ ಇಂದಿನ ಕಾಲಮಾನದಲ್ಲಿ ಸಾಧಕರಿಗಿಂತ ಸಮಯ ಸಾಧಕರು ಹೆಚ್ಚಾಗಿದ್ದು, ಗೌರವವನ್ನು ಹುಡುಕಿಕೊಂಡು ಹೋಗುತ್ತಾರೆ. ಮನುಷ್ಯನಲ್ಲಿ ಉತ್ತಮ ಮೌಲ್ಯ ಇರಬೇಕು. ಶ್ರೀನಿವಾಸ ಶೆಟ್ಟರ ತಂದೆ- ತಾಯಿ, ಹಿರಿಯರು ಅವರಲ್ಲಿ ಅಂತಹ ಮೌಲ್ಯ ತುಂಬಿದ್ದಾರೆ. ಶೆಟ್ಟರು ಸರಸ್ವತಿ ಆರಾಧಕರಾಗಿ ಲಕ್ಷ್ಮೀ ಒಲಿಸಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ. ಗಂಡು ಮೆಟ್ಟಿನ ಹಾದಿಯಲ್ಲಿ ಸಾಗಿ ಸಾಧಿಸಿ ಕನ್ನಡ ಸಾಹಿತ್ಯ ಸಂಸ್ಕೃತಿ ಅಸ್ಮಿತೆ ಜತೆ ಗುರುತಿಸಿಕೊಂಡವರು. ಹಣತೆ ಮಾತಾಡುವುದಿಲ್ಲ ಬೆಳಕು ನೀಡುತ್ತದೆ. ಹಾಗೆ ನಾವು ನಮ್ಮ ಅಸ್ತಿತ್ವ ಉಳಿಸಿಕೊಂಡು ಛಾಪು ಮೂಡಿಸಬೇಕು ಎಂದರು.

ಲೋಕದ ಜಡವಸ್ತುಗಳು ಉಪಯೋಗಕ್ಕೆ ಬರುವಾಗ ಮನುಷ್ಯ ಸಮಾಜದ ಉಪಯೋಗಕ್ಕೆ ನಿಲುಕಬೇಕು. ಕಾಲ ವ್ಯರ್ಥ ಮಾಡದೆ ಅರ್ಥಪೂರ್ಣ ಬದುಕು ನಡೆಸಿ ಹೆಜ್ಜೆ ಗುರುತುಗಳನ್ನು ಮೂಡಿಸಿ ಹೋಗಬೇಕು. ಹುಟ್ಟುವಾಗ ಉಸಿರು ಇರುತ್ತದೆ. ಹೋಗುವಾಗ ಹೆಸರು ಮಾಡಿ ಹೋಗಬೇಕು. ಕ್ರಿಯಾಶೀಲ ವ್ಯಕ್ತಿಗಳು ಕೆಲಸ ಮಾಡಲು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಕ್ರೀಡೆ, ಕಲೆ, ಸಾಹಿತ್ಯ ಅನೇಕ ರಂಗಗಳಿವೆ. ಕಾಯಕವೇ ಕೈಲಾಸ ಎಂದು ಕೆಲಸ ಮಾಡುವವರೂ ಇದ್ದಾರೆ. ಶ್ರೀನಿವಾಸ ಶೆಟ್ಟರು ಅಂತಹವರಲ್ಲಿ ಒಬ್ಬರು ಎಂದು ಬಣ್ಣಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಮಾತನಾಡಿ, ಒಬ್ಬ ವ್ಯಕ್ತಿಗೆ ಮೂರು ರೀತಿಯ ಜೀವನ ಇರುತ್ತದೆ. ಒಂದು ವೈಯಕ್ತಿಕ, ಸಾರ್ವಜನಿಕ ಹಾಗೂ ಸಾಮಾಜಿಕ. ವೈಯಕ್ತಿಕವಾಗಿ ಸಾಧನೆ ಮಾಡಿರುವ ಶೆಟ್ಟರು ಸಾಮಾಜಿಕವಾಗಿ ಹಾಗೂ ಸಾರ್ವಜನಿಕವಾಗಿ ನಿವೃತ್ತಿಯ ನಂತರ ಹೆಚ್ಚು ಕೆಲಸಗಳನ್ನು ಮಾಡಬೇಕು ಎಂದರು.

ಪತ್ರಕರ್ತ ಡಿ.ಎನ್.ಶ್ರೀಪಾದು ಅಭಿನಂದನಾ ನುಡಿಗಳನ್ನಾಡಿದರು. ಸಂಸ್ಕೃತ ವಿವಿ ನಿವೃತ್ತ ಉಪಕುಲಪತಿ ಡಾ.ಪದ್ಮಾಶೇಖರ್ ಮಾತನಾಡಿದರು. ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮೈಸೂರು ವಿಭಾಗದ ಎಲ್‌ಐಸಿ ಹಿರಿಯ ವಿಭಾಗಾಧಿಕಾರಿ ಜಿ.ಸತ್ಯನಾರಾಯಣ ಶಾಸ್ತ್ರೀ, ಎಲ್‌ಐಸಿ ಸೇಲ್ಸ್ ಟ್ರೈನಿಂಗ್ ಸೆಂಟರ್‌ನ ಪ್ರಾಚಾರ್ಯ ವೆಂಕಟರಮಣ ಶಿರೂರು, ಧಾರವಾಡ ಡಾ.ಡಿ.ಜಿ.ಶೆಟ್ಟಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ.ಡಿ.ಜಿ.ಶೆಟ್ಟಿ, ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ, ಗೌರವಾಧ್ಯಕ್ಷ ಬಿ.ಟಿ.ಜಯರಾಮ್, ಶ್ರೀನಿವಾಸ ಶೆಟ್ಟರ ಪತ್ನಿ ಅನಿತಾಶೆಟ್ಟಿ, ತಾಯಿ ರತ್ನಮ್ಮ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net