ಶಿಕ್ಷಕ ಎಸ್.ಎನ್.ಪಾಲಾಕ್ಷಪ್ಪ ವಿರಚಿತ ‘ಅಕ್ಷರ ಪಯಣ’ ಬಿಡುಗಡೆ

10sgr2
ಸಾಗರದಲ್ಲಿ ಎಸ್.ಎನ್.ಪಾಲಾಕ್ಷಪ್ಪ ಅವರ ಅಕ್ಷರ ಪಯಣ ಕೃತಿಯನ್ನು ಸಾಹಿತಿ ವಿ.ಗಣೇಶ್ ಬಿಡುಗಡೆಗೊಳಿಸಿದರು. ವಿ.ಟಿ.ಸ್ವಾಮಿ, ಜಿ.ಮಹಾಬಲೇಶ್ವರ, ಲಕ್ಷ್ಮಣ್ ಆರ್. ನಾಯ್ಕ, ಕೆ.ಜಗನ್ನಾಥ್ ಇತರರಿದ್ದರು.
Published on

ಸಾಗರ: ಒಬ್ಬ ಸಾಹಿತಿ, ಕಲಾವಿದ, ಲೇಖಕ ತನ್ನ ಬದುಕನ್ನು ದಾಖಲಿಸುತ್ತ ಸಾಗುತ್ತಾನೆ. ಅದರಲ್ಲೂ ಸಾಹಿತಿಗಳು ತಮ್ಮ ಜೀವನ ಅನುಭವವನ್ನು ನಿರಂತರವಾಗಿ ದಾಖಲಿಸುತ್ತ ಬಂದಿದ್ದಾರೆ ಎಂದು ಸಾಹಿತಿ ವಿ.ಗಣೇಶ್ ತಿಳಿಸಿದರು.

ನಗರದ ಗುರುಭವನದಲ್ಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕ ಎಸ್.ಎನ್.ಪಾಲಾಕ್ಷಪ್ಪ ಅವರ ಅಕ್ಷರ ಪಯಣ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ, ಪಾಲಾಕ್ಷಪ್ಪ ಅವರ ಅಕ್ಷರ ಪಯಣ ಕೃತಿಯೊಳಗಿನ ಅಂಶಗಳು ನಮ್ಮೆಲ್ಲರ ಬದುಕಿನಲ್ಲಿ ಬಂದು ಹೋಗಿದ್ದೆ ಆಗಿದೆ. ಬಾಲ್ಯದಿಂದ ಈತನಕದ ಸಾಗಿಬಂದ ಜೀವನದ ವಿವಿಧ ಮಜಲುಗಳನ್ನು ಅತ್ಯಂತ ಗಟ್ಟಿಯಾಗಿ ದಾಖಲಿಸುವ ಕೆಲಸವನ್ನು ಅವರು ಮಾಡಿದ್ದಾರೆ ಎಂದರು.
ಯಾವುದೇ ಕೃತಿ ಕೈನಲ್ಲಿ ಹಿಡಿದುಕೊಂಡಾಗ ಅದು ಓದಿಸಿಕೊಂಡು ಹೋಗಬೇಕು. ಪಾಲಾಕ್ಷಪ್ಪ ಅವರ ಅಕ್ಷರ ಪಯಣ ಎಂತಹವರನ್ನು ತನ್ನತ್ತ ಸೆಳೆಯುವ ಶಕ್ತಿ ಹೊಂದಿದೆ. ಬರವಣಿಗೆ ನಮ್ಮ ಸಂಸ್ಕಾರವನ್ನು ತೋರಿಸುತ್ತದೆ. ನಾವು ಬಾಲ್ಯದಿಂದ ಕಳೆದ ದಿನಗಳನ್ನು ದಾಖಲಿಸುವುದು, ಅದನ್ನು ಸಾಹಿತ್ಯ ರೂಪಕ್ಕೆ ಇಳಿಸುವುದು ಸ್ತುತ್ಯಾರ್ಹ ಮಾರ್ಗ. ಒಬ್ಬ ಒಳ್ಳೆಯ ಕವಿಯಾಗಿಯೂ ಅವರು ಹೊರಹೊಮ್ಮಿದ್ದಾರೆ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ಪುಸ್ತಕ ಕುರಿತು ಮಾತನಾಡಿದ ಉಪನ್ಯಾಸಕ ಡಾ. ಸರ್ಫ್ರಾಜ್ ಚಂದ್ರಗುತ್ತಿ, ಶಿಕ್ಷಕ ವೃತ್ತಿಗಿಂತ ಮೊದಲು, ಶಿಕ್ಷಕ ವೃತ್ತಿಯ ದಿನಗಳು, ಪ್ರವಾಸದ ಸಂದರ್ಭ ಸೇರಿದಂತೆ ಮೂರು ಆಯಾಮಗಳಲ್ಲಿ ಅಕ್ಷರ ಪಯಣ ಮುಂದುವರಿಯುತ್ತದೆ. ಗ್ರಾಮೀಣ ಭಾಗದ ಬಡತನವನ್ನು ಜತೆಗಿಟ್ಟುಕೊಂಡು ಬಂದ ಪಾಲಾಕ್ಷಪ್ಪ ಅವರದ್ದು ಹುಡುಕಾಟದ ಮನೋಭಾವ. ಶಾಲಾ ಪರಿಸರದ ಜತೆಗೆ ಪಾಲಾಕ್ಷಪ್ಪ ತಮ್ಮ ಸಾಹಿತ್ಯ ಬದುಕು ಕಟ್ಟಿಕೊಂಡವರು. ಅವರ ಅಕ್ಷರ ಕೃಷಿ, ಸಾಹಿತ್ಯ ಲೋಕಕ್ಕೆ ಹೊಸ ಹೊಸ ಕೃತಿಗಳನ್ನು ನೀಡುವ ಮುನ್ಸೂಚನೆಯಾಗಿದೆ. ಅವರಿಂದ ಇನ್ನೂ ಉತ್ತಮ ಕೃತಿಗಳು ಹೊರ ಬರಲಿ ಎಂದರು.
ತಾಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿ.ಮಹಾಬಲೇಶ್ವರ, ಲಕ್ಷ್ಮಣ್ ಆರ್.ನಾಯ್ಕ, ಕೆ.ಜಗನ್ನಾಥ್, ಟಿ.ಪಿ.ಸುಬ್ರಹ್ಮಣ್ಯ, ದತ್ತಾತ್ರೇಯ ಭಟ್, ಎಲ್.ಟಿ.ಗವಿಯಪ್ಪ, ನಾರಾಯಣಮೂರ್ತಿ ಕಾನುಗೋಡು, ಜಿ.ನಾಗೇಶ್, ಡಾ. ಟಿ.ಪ್ರಸನ್ನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net