

ಬೆಂಗಳೂರು: ಪೂರ್ಣಗೊಂಡ ಬಿಬಿಎಂಪಿ ಕಾಮಗಾರಿಗಳ ಶೇ.50 ರಷ್ಟು ಹಣ ಬಿಡುಗಡೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸಿಎಂ ಗೃಹಕಚೇರಿ ಕೃಷ್ಣಾ ಬಳಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪೂರ್ಣಗೊಂಡಿರುವ ಕೆಲಸಗಳಿಗೆ ಆದ್ಯತೆ ಮೇರೆಗೆ ಶೇ.50ರಷ್ಟು ಹಣ ಬಿಡುಗಡೆ ಮಾಡಿ, ಬಾಕಿ ಹಣ ಸಮಿತಿಯ ವರದಿ ಬಂದ ನಂತರ ಬಿಡುಗಡೆಗೆ ತೀರ್ಮಾನ ಮಾಡಲಾಗುವುದು ಎಂದರು.
ಸೆ.7 ಕ್ಕೆ ಭಾರತ್ ಜೋಡೊ ಯಾತ್ರೆಗೆ 1 ವರ್ಷ ತುಂಬುತ್ತದೆ. ಇದರ ನೆನಪಿಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಒಂದು ಗಂಟೆಗಳ ಕಾಲ ಪಾದಯಾತ್ರೆ ಹಮ್ಮಿಕೊಳ್ಳಬೇಕು ಎಂದು ನಿರ್ಧರಿಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮನಗರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದು, ಅಲ್ಲಿ ಅವರು ಹೆಜ್ಜೆ ಹಾಕಲಿದ್ದಾರೆ ಎಂದು ಮಾಹಿತಿ ನೀಡಿದರು.
ಪಾದಯಾತ್ರೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಬೇಕು ಎಂದು ಯೋಚನೆ ಇತ್ತು, ನಾಗರಿಕರಿಗೆ ಟ್ರಾಫಿಕ್ ಸಮಸ್ಯೆ ಆಗುತ್ತದೆ ಎಂದು ಕೈಬಿಡಲಾಯಿತು. ಸೆ.7 ರಂದು ಕ್ಯಾಬಿನೆಟ್ ಸಭೆ ಇರುವ ಕಾರಣ ಜಿಲ್ಲಾ ಮಂತ್ರಿಗಳು ಆಯಾಯ ಜಿಲ್ಲೆಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸಬೇಕು ಎಂದು ಸತೀಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದಾರೆಯೇ ಎನ್ನುವ ಪ್ರಶ್ನೆಗೆ, ಆಡಳಿತ ದೃಷ್ಟಿಯಿಂದ ಸುಲಭ ಆಗುತ್ತದೆ ಎಂದು ಪ್ರಸ್ತಾವನೆ ಸಲ್ಲಿಸಿದ್ದಾರೆ. ಆ ವಿಚಾರವಾಗಿ ಯಾವುದೇ ತೀರ್ಮಾನ ಸದ್ಯಕ್ಕಿಲ್ಲ. ರಾಮನಗರ, ಗದಗ, ಚಾಮರಾಜನಗರ ನಾಲ್ಕು ಮತ್ತು ಕೊಡಗು ಎರಡು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿವೆ. ಯಾರೂ ಗಾಬರಿ ಮಾಡಿಕೊಳ್ಳುವ ಅಗತ್ಯವಿಲ್ಲ. ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಉತ್ತರಿಸಿದರು.
3 ತಿಂಗಳಲ್ಲಿ 122 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಶ್ನೆಗೆ, ಎಲ್ಲಿದೆ ಆ ವರದಿ ನನಗೆ ನೀಡಿ. ಎಲ್ಲ ಸುಳ್ಳು ಸುದ್ದಿ, ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಪ್ರತಿಕ್ರಿಯಿಸಿದರು.
ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ ಎನ್ನುವ ಬಿಜೆಪಿಯವರು ಆರೋಪಕ್ಕೆ ಉತ್ತರಿಸಿದ ಅವರು, ಕೇವಲ ಆರೋಪ ಮಾಡುವುದಷ್ಟೇ ಅವರ ಕೆಲಸ, ಮಾಡಲಿ ಬಿಡಿ. ಅವರು ಇರುವುದೇ ಆರೋಪ ಮಾಡಲು. ನಾವು ಕುಡಿಯುವ ನೀರಿನ ವಿಚಾರದಲ್ಲಿ ಬೆಂಗಳೂರಿಗೆ ಮೊದಲ ಆದ್ಯತೆ ನೀಡಿದ್ದೇವೆ. ಜತೆಗೆ ಇತರೆಡೆಯೂ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಎಲ್ಲೆಲ್ಲಿ ತೊಂದರೆ ಉಂಟಾಗಿದೆ ಅಲ್ಲೆಲ್ಲ ತುರ್ತಾಗಿ ಪರ್ಯಾಯ ನೀರಿನ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.