ಕಾಲಮಿತಿಯಲ್ಲಿ ಗುತ್ತಿಗೆದಾರರಿಗೆ ಹಣ ಬಿಡುಗಡೆಗೊಳಿಸಿ: ಜೆಡಿಎಸ್​ ಸದಸ್ಯ ಟಿ.ಎ.ಶರವಣ ಆಗ್ರಹ

Sharavana
Published on

ಬೆಂಗಳೂರು: ಗುತ್ತಿಗೆದಾರರಿಗೆ ಬಾಕಿ ಬಿಲ್​ಗಳಿಗೆ ಹಣವನ್ನು ಕಾಲಮಿತಿಯಲ್ಲಿ ಬಿಡುಗಡೆ ಮಾಡುವಂತೆ ಜೆಡಿಎಸ್​ ಸದಸ್ಯ ಟಿ.ಎ.ಶರವಣ ಆಗ್ರಹಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಕಾಮಗಾರಿಗಳ ಬಿಲ್​ ಪಾವತಿ ಬಗ್ಗೆ ಪ್ರಶ್ನೆ ಕೇಳಿದ ಶರವಣ, ಲೋಕೋಪಯೋಗಿ ಇಲಾಖೆಯು ಬಿಲ್​ ಪಾವತಿಯಲ್ಲಿ ವಿಳಂಬ ಮಾಡುತ್ತಿದ್ದು, ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಗುತ್ತಿಗೆದಾರರು ಕಾಮಗಾರಿ ನಡೆಸಿದ್ದರೂ ಅವರ ಹಣ ಬಿಡುಗಡೆಯಾಗಿಲ್ಲ. ಗುತ್ತಿಗೆದಾರರಿಗೆ 8,000 ಕೋಟಿ ರೂ ಗಿಂತ ಹೆಚ್ಚು ಬಿಲ್​ ಹಣ ಬಾಕಿಯಿದೆ. ಇದರಿಂದ ನೊಂದಿರುವ ಗುತ್ತಿಗೆದಾರರು ವಿಷ ಕುಡಿಯುತ್ತೇವೆ ಎಂದು ಹೇಳುತ್ತಿದ್ದಾರೆ. ಸರ್ಕಾರ ಮಾನವೀಯವಾಗಿ ವರ್ತಿಸಿ ಅವರ ಹಣ ಬಿಡುಗಡೆ ಮಾಡಬೇಕು. ಜೊತೆಗೆ ಬಿಲ್​ ಬಾಕಿ ಚುಕ್ತಾ ಮಾಡುವ ಕಾಲಮಿತಿಯನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ, ಗುತ್ತಿಗೆದಾರರಿಗೆ 9 ಸಾವಿರ ಕೋಟಿ ರೂ ಹಣ ಬಾಕಿ ಇದೆ. ಏಕಕಾಲದಲ್ಲಿ ಇಷ್ಟೊಂದು ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಬಾಕಿ ಮೊತ್ತವನ್ನು ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಬಾಕಿ ಬಿಲ್​ ಬಗ್ಗೆ ಈಗಾಗಲೇ ಹಣಕಾಸು ಸಚಿವರ ಜೊತೆ ಮಾತನಾಡಿದ್ದೇವೆ. ಹಿಂದಿನ ಸರ್ಕಾರ ಅಂದಾಜು 23 ಸಾವಿರ ಕೋಟಿ ರೂ ಗಳಿಗಿಂತ ಹೆಚ್ಚು ಮೊತ್ತದ ಕಾಮಗಾರಿಗಳನ್ನು ಬಜೆಟ್​ನಲ್ಲಿ ಹಣ ಮೀಸಲಿರಿಸದೇ ನೀಡಿದ್ದರಿಂದ ಈ ಸಮಸ್ಯೆ ಉದ್ಭವವಾಗಿದೆ. ಆದರೂ ನಮ್ಮ ಸರ್ಕಾರ ಹಣ ಬಿಡುಗಡೆ ಮಾಡಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net