ಮಕ್ಕಳಿಗೆ ಉಪಪಠ್ಯವಾಗಿ ಬೋಧಿಸಲು 'ಕೀಕಾ' ಸಹಕಾರಿ

UDP-12-1-Book
ಉಡುಪಿಯಲ್ಲಿ ಕೀಕಾ ಕೃತಿಯನ್ನು ನೀಲಾವರ ಸುರೇಂದ್ರ ಅಡಿಗ ಬಿಡುಗಡೆಗೊಳಿಸಿದರು. ಶಾಂತಾರಮ್​ ಐತಾಳ್​, ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಜನಾರ್ದನ ಕೊಡವೂರು, ಪುರುಷೋತ್ತಮ ಶೆಟ್ಟಿ, ಮಹೇಶ್​ ಶೆಟ್ಟಿ, ರಾಜೇಂದ್ರ, ಪ್ರಿಯದರ್ಶಿನಿ ಪಿ., ಶರಣಮ್ಮ ಇದ್ದರು.
Published on

ನೀಲಾವರ ಸುರೇಂದ್ರ ಅಡಿಗ ಅಭಿಪ್ರಾಯ | ಪ್ರಿಯದರ್ಶಿನಿ ವಿರಚಿತ ಕೃತಿ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಮಾಹಾರಾಣಾ ಪ್ರತಾಪ್​ ಸಿಂಹನ ಜೀವನ, ಚಾಣಕ್ಯ, ಪರಿಸರ ಅಧ್ಯಯನ, ಸ್ವಾತಂತ್ರ್ಯ ಹೋರಾಟ, ಹಿಮಾಲಯ, ಗರುಡ-ಹುಲಿಗಳ ಕುರಿತು ಹೀಗೆ ಅನೇಕ ಮಾಹಿತಿ ಒಳಗೊಂಡ ವಿಶಿಷ್ಟ ಕೃತಿ ಇದಾಗಿದ್ದು, 4ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಉಪಪಠ್ಯವಾಗಿ ಬೋಧಿಸಲು ಶಿಕ್ಷಕರಿಗೆ ಪೂರಕವಾಗಿದೆ ಎಂದು ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಭಿಪ್ರಾಯಪಟ್ಟರು.

ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೃತ್ತಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿರುವ ಹಾಗೂ ಉಡುಪಿ ಡಿವೈಎಸ್ಪಿ ಡಿ.ಟಿ. ಪ್ರಭು ಅವರ ಪುತ್ರಿ, ಯುವ ಸಾಹಿತಿ ಪ್ರಿಯದರ್ಶಿನಿ ಪಿ. ಅವರ ಕೀಕಾ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಶೋಧಿಸುವ ಗುಣ ಅಗತ್ಯ

ಕೃತಿಯಲ್ಲಿ 30 ಅಧ್ಯಾಯಗಳಿದ್ದು, ಇದನ್ನು ಓದಿದರೆ 30 ಪುಸ್ತಕ ಓದಿದ ಅನುಭವವಾಗುತ್ತದೆ. ಯಾರು ಚೆನ್ನಾಗಿ ಓದುತ್ತಾರೆಯೋ ಅವರಿಗೆ ಅಪಾರ ಜ್ಞಾನ ಲಭಿಸುತ್ತದೆ. ಅದರಂತೆ ಲೇಖಕಿ ಪ್ರಿಯದರ್ಶಿನಿ ಎಷ್ಟು ಅಧ್ಯಯನ ಮಾಡಿರಬಹುದು ಎನ್ನುವುದಕ್ಕೆ ಕೀಕಾ ಕೃತಿ ಸಾಕ್ಷಿಯಾಗಿದೆ. ಇಂದಿನ ಯುವ ಸಮುದಾಯ ಸಂಗ್ರಹಿಸುವ, ಶೋಧಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಸಾಹಿತ್ಯಕ್ಕೆ ಯುವ ಸಮುದಾಯ ಬರಬೇಕು. ಅದರಂತೆ ಪುಸ್ತಕ ಓದುವವರ ಸಂಖ್ಯೆಯೂ ಹೆಚ್ಚಾಗಬೇಕು ಎಂದರು.

ಲೋಕಜ್ಞಾನ ಹೆಚ್ಚಳ

ಕಾರ್ಯಕ್ರಮ ಉದ್ಘಾಟಿಸಿದ ಹಾಸ್ಯಕವಿ ಹಾಗೂ ಲೇಖಕ ಶಾಂತರಾಜ್​ ಐತಾಳ್​ ಮಾತನಾಡಿ, ಸಾಹಿತ್ಯ ಪ್ರಪಂಚ ಮುನ್ನಡೆಸಲು ಬಂದ ಯುವ ಸಮುದಾಯ ಕಂಡು ಅತೀವ ಸಂತಸವಾಗಿದೆ. ಸ್ವಲ್ಪ ಸಮಯ ಸಿಕ್ಕರೂ ಮೊಬೈಲ್​ನೊಳಗೆ ಕಳೆದು ಹೋಗುವ ಇಂದಿನ ಮಕ್ಕಳು, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷ. ಪಠ್ಯಗಳೊಂದಿಗೆ ಇತರ ಪುಸ್ತಕಗಳನ್ನೂ ಓದುವುದರಿಂದ ಲೋಕ ಜ್ಞಾನ ಲಭಿಸುತ್ತದೆ ಎಂದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಕಸಾಪ ಉಡುಪಿ ತಾಲೂಕು ಘಟಕದ ಗೌ.ಕಾರ್ಯದರ್ಶಿ ಜನಾರ್ದನ ಕೊಡವೂರು, ಉಜ್ವಲ ಡೆವೆಲಪರ್ಸ್​ನ ಮಾಲೀಕ ಪುರುಷೋತ್ತಮ ಶೆಟ್ಟಿ, ಪೂರ್ಣಪ್ರಜ್ಞ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಮಹೇಶ್​ ಶೆಟ್ಟಿ, ಡಾ. ಜಿ.ಶಂಕರ್​ ಸರ್ಕಾರಿ ಕಾಲೇಜಿನ ಇತಿಹಾಸ ಶಾಸ್ತ್ರ ವಿಭಾಗದ ಮುಖ್ಯಸ್ಥ ರಾಜೇಂದ್ರ, ಲೇಖಕಿ ಪ್ರಿಯದರ್ಶಿನಿ ಪಿ., ತಾಯಿ ಶರಣಮ್ಮ ಪಿ. ಉಪಸ್ಥಿತರಿದ್ದರು.

ನವ್ಯಾ ಪ್ರಾರ್ಥಿಸಿದರು. ಕಾನ್​ಸ್ಟೇಬಲ್​ ಯೋಗೀಶ್​ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್​ ಸಹಕರಿಸಿದರು.

ಮಹಾರಾಣಾ ಪ್ರತಾಪ್​ ಸಿಂಹ ಅವರು ಬಾಲಕನಾಗಿದ್ದಾಗ ಭೀಡ್​ ಎಂಬ ಬುಡಕಟ್ಟು ಜನಾಂಗದವರ ಬಳಿ ಯುದ್ಧ ಕಲೆ ಕಲಿಯುತ್ತಿದ್ದರು. ಆ ವೇಳೆ ಬುಡಕಟ್ಟು ಜನರು ಪ್ರತಾಪ್​ ಅವರನ್ನು ಪ್ರೀತಿಯಿಂದ ಕೀಕಾ ಎಂದು ಕರೆಯುತ್ತಿದ್ದರು. ಹೀಗಾಗಿ ನನ್ನ ಕೃತಿಗೆ ಕೀಕಾ ಎಂದೇ ಹೆಸರು ಇಟ್ಟಿದ್ದೇನೆ. ಪ್ರಿಯದರ್ಶಿನಿ ಪಿ. ಲೇಖಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net