ಬ್ಯಾಡಗಿ ಅಭಿವೃದ್ಧಿಗೆ ಹಣ ಬಿಡುಗಡೆಗೊಳಿಸಿ

BYD CHALANE
Published on

ಬ್ಯಾಡಗಿ: ಪುರಸಭೆ ವ್ಯಾಪ್ತಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಮುಖ್ಯಮಂತ್ರಿಗಳ ಬಳಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಇಲ್ಲಿನ ಗಾಂಧಿನಗರದ ಉದ್ಯಾನದಲ್ಲಿ 36 ಲಕ್ಷ ರೂ. ವೆಚ್ಚದ ನಗರೋತ್ಥಾನ ಯೋಜನೆಯ ವಿವಿಧ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

2016-17ರಲ್ಲಿ ಬ್ಯಾಡಗಿಯ ಸಂತೆ ಮಾರುಕಟ್ಟೆ ಮೇಲ್ಚಾವಣಿ, ವಾಣಿಜ್ಯ ಮಳಿಗೆಗಳ ನಿರ್ವಣದ ಮೂಲಕ ಪುರಸಭೆಗೆ ಆದಾಯ ತಂದುಕೊಡುವ ನಿಟ್ಟಿನಲ್ಲಿ ಅಭಿವೃದ್ಧಿಗೊಳಿಸಿದ್ದು, ಸಾಕಷ್ಟು ಮಳಿಗೆಗಳ ಬಾಡಿಗೆ ಸಂದಾಯವಾಗುತ್ತಿದೆ. ಅಲ್ಲದೆ, ಸಾರ್ವಜನಿಕರು ಮಳೆ ಹಾಗೂ ಬೇಸಿಗೆ ಕಾಲದಲ್ಲಿ ಸಂತೆ ನಡೆಸಲು ಅನುಕೂಲವಾಗಿದೆ ಎಂದರು.

ಪಟ್ಟಣದಲ್ಲಿ 45ಕ್ಕೂ ಹೆಚ್ಚು ಉದ್ಯಾನಗಳಿದ್ದು, ಹಂತಹಂತವಾಗಿ ಅಭಿವೃದ್ಧಿಪಡಿಸಬೇಕಿದೆ. ಗಾಂಧಿನಗರದ ಉದ್ಯಾನದಲ್ಲಿ ನಗರೋತ್ಥಾನ ಯೋಜನೆಯಡಿ 36 ಲಕ್ಷ ರೂ.ಗಳಲ್ಲಿ ಗಾಂಧಿನಗರ, ವಾಲ್ಮೀಕಿ ನಗರ, ಸುಭಾಸ ನಗರಗಳಲ್ಲಿ ಉದ್ಯಾನ, ಚರಂಡಿ ಅಭಿವೃದ್ಧಿ ಕಾಮಗಾರಿ ಹಾಗೂ ಅಂಗವಿಕಲರಿಗೆ ವಿಶ್ರಾಂತಿ ಕಟ್ಟಡ ನಿರ್ವಿುಸಲಾಗುತ್ತಿದೆ. 24 ಗಂಟೆಗಳ ಕಾಲ ಕುಡಿಯುವ ನೀರು ಒದಗಿಸಲು, ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ ಮಾತನಾಡಿ, ಬ್ಯಾಡಗಿ ಸುಂದರ ನಗರವನ್ನಾಗಿಸಲು ರಸ್ತೆಗಳನ್ನು ಗುಣಮಟ್ಟವಾಗಿ ನಿರ್ವಿುಸಲಾಗುತ್ತಿದೆ. ಮುಖ್ಯರಸ್ತೆ ಸಮಸ್ಯೆ ಹೊರತುಪಡಿಸಿ ಎಲ್ಲ ಕಡೆಗಳಲ್ಲಿ ರಸ್ತೆಗಳು ನಿರ್ವಿುಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಶುದ್ಧ ಕುಡಿಯುವ ನೀರು ಒದಗಿಸುವ 24*7 ನೀರು ಪೂರೈಕೆ ಕಾಮಗಾರಿ ನಡೆದಿದೆ. ಸಾರ್ವಜನಿಕರು ಸಕಾಲಕ್ಕೆ ತೆರಿಗೆ ಭರಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಉಪಾಧ್ಯಕ್ಷ ಸುಭಾಸ ಮಾಳಗಿ, ಸದಸ್ಯರಾದ ಬಸವರಾಜ ಛತ್ರದ, ಸರೋಜಾ ಉಳ್ಳಾಗಡ್ಡಿ, ಗಾಯತ್ರಿ ರಾಯ್ಕರ, ಕಲಾವತಿ ಬಡಿಗೇರ, ಫಕೀರಮ್ಮ ಚಲವಾದಿ, ಈರಣ್ಣ ಬಣಕಾರ, ಶಂಕರ ಕುಸಗೂರು, ಮಹಬೂಬ್ ಅಗಸನಹಳ್ಳಿ, ಮಹ್ಮದ್​ರಫೀ ಮುದಗಲ್ಲ, ಹನುಮಂತಪ್ಪ ಮ್ಯಾಗೇರಿ, ಶ್ರೀನಿವಾಸ ಕುರಕುಂದಿ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಆಶ್ರಯ ಸಮಿತಿ ಅಧ್ಯಕ್ಷ ಮುನ್ನಾಫಲಿ ಎರೆಸೀಮೆ, ಸದಸ್ಯ ಗಿರೀಶ ಇಂಡಿಮಠ, ದುರ್ಗೆಶ ಗೋಣೆಮ್ಮನವರ, ಇಂಜಿನಿಯರ್ ಸಂಗಮೇಶ ಹಾದಿಮನಿ, ದಾನಪ್ಪ ಚೂರಿ, ಗುತ್ತಿಗೆದಾರ ನೀಲಪ್ಪ ಬಣಕಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net